MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 168

249
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 168

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

906 . ಓಂ ಅಷ್ಟಮೂರ್ತಿಭೃತೇ ನಮಃ
907 . ಓಂ ಅಷ್ಟಚಕ್ರಸ್ಫುರನ್ಮೂರ್ತಯೇ ನಮಃ
908 . ಓಂ ಅಷ್ಟದ್ರವ್ಯಹವಿಃಪ್ರಿಯಾಯ ನಮಃ
909 . ಓಂ ಅಷ್ಟದ್ರವ್ಯಹವಿಃಪ್ರಿಯಾಯ ನಮಃನಮಃ
910 . ಓಂ ನವನಿಧ್ಯನುಶಾಸಿತ್ರೇ ನಮಃ

906. ಓಂ ಅಷ್ಟಮೂರ್ತಿಭೃತ್-
ಭಾ: ಭೂತಾನಿ ಪುಣ್ಯವನ್ತೌ ಸ್ವಃ ಏತದ್ರೂಪೋ7ಷ್ಟಮೂರ್ತಿಭೃತ್‌|
ಪಂಚಭೂತಗಳು, ಸೂರ್ಯಚಂದ್ರರು, ಸ್ವರ್ಗ ಇವುಗಳ ರೂಪವನ್ನು ಧರಿಸಿದವನಾದ್ದರಿಂದ ಗಣೇಶನು ಅಷ್ಟಮೂರ್ತಿಭೃತ್. (ಸೂರ್ಯಚಂದ್ರರನ್ನು ಪುಣ್ಯವಂತರು ಹಾಗೂ ಪುಷ್ಪವಂತರು ಎಂದು ಕರೆಯುತ್ತಾರೆ. ದಿವಾರಾತ್ರಿಗಳಿಗೆ ಕಾರಣರಾಗಿ ಮನುಷ್ಯರಿಂದ ಪುಣ್ಯಕರ್ಮಗಳನ್ನು ಮಾಡಿಸುವುದರಿಂದ ಅವರಿಗೆ ಪುಣ್ಯವಂತರೆಂದು ಹೆಸರು. ಸೂರ್ಯನಿಂದ ಪದ್ಮವು, ಚಂದ್ರನಿಂದ ರಾತ್ರಿಪುಷ್ಪಗಳು ಅರಳುತ್ತವೆ. ಆದ್ದರಿಂದ ಅವರನ್ನು ಪುಷ್ಪವಂತರೆನ್ನುತ್ತಾರೆ.)
ಓಂ ಅಷ್ಟಮೂರ್ತಿಭೃತೇ ನಮಃ
ಅಷ್ಟಚಕ್ರಸ್ಫುರನ್ಮೂರ್ತಿ ರಷ್ಟದ್ರವ್ಯಹವಿಃಪ್ರಿಯಃ|
ನವನಾಗಾಸನಾಧ್ಯಾಸೀ ನವನಿಧ್ಯನುಶಾಸಿತಾ||

907. ಓಂ ಅಷ್ಟಚಕ್ರಸ್ಫುರನ್ಮೂರ್ತಿಃ-
ಭಾ: ಅಷ್ಟಾಚಕ್ರಾ ನವದ್ವಾರಾ ದೇವಾನಾಂ ಪೂರಿತಿ ಶ್ರುತೇಃ|
ಯಂತ್ರೇ ತಿಷ್ಠನ್ನಷ್ಟಚಕ್ರಸ್ಫುರನ್ಮೂರ್ತಿರಿತಿ ಸ್ಮೃತಃ||
ಶ್ರೀಚಕ್ರವನ್ನು ಅಷ್ಟಕೋಣವೆಂದು ಕೂಡಾ ಕರೆಯುತ್ತಾರೆ. ಶ್ರೀಮಾತೆಗೂ, ಗಣಪತಿಗೂ ಅಭೇದವಿರುವುದರಿಂದ ಗಣೇಶನು ಶ್ರೀಮಾತೃ ಸ್ವರೂಪದಲ್ಲಿ ಶ್ರೀಚಕ್ರದಲ್ಲಿ ಬೆಳಗುತ್ತಿರುತ್ತಾನೆ. “ಅಷ್ಟಾಚಕ್ರಾ ನವದ್ವಾರಾ ದೇವಾನಾಂ ಪೂರಯೋಧ್ಯಾ” ಎಂಬ ಯಜುರ್ವೇದದ ಮಂತ್ರದಿಂದ ಶ್ರೀಚಕ್ರದ ಸ್ವರೂಪವು ಹಾಗೂ ದೇವತೆಗಳೆಲ್ಲರೂ ಶ್ರೀಯಂತ್ರದಲ್ಲಿಯೇ ಇದ್ದಾರೆ ಎಂದು ಕೂಡಾ ತಿಳಿದುಬರುತ್ತದೆ. ಅಷ್ಟಚಕ್ರದಲ್ಲಿ ಇರುವುದರಿಂದ ಗಣೇಶನು ಅಷ್ಟಚಕ್ರಸ್ಫುರನ್ಮೂರ್ತಿಯು.
ಓಂ ಅಷ್ಟಚಕ್ರಸ್ಫುರನ್ಮೂರ್ತಯೇ ನಮಃ

908. ಓಂ ಅಷ್ಟದ್ರವ್ಯಹವಿಃಪ್ರಿಯಃ-
ಭಾ: ತಿಲೇಷು ಸಕ್ತುಚಿಪಿಟಃ ಕದಲ್ಯೋ ಮೋದಕಾಸ್ತಿಲಾಃ|
ನಾರಿಕೇಲ ಘೃತಾಕ್ತಾನೀತ್ಯಷ್ಟದ್ರವ್ಯಹವಿಃಪ್ರಿಯಃ||
ಎಳ್ಳು, ಕಬ್ಬಿನ ತುಂಡುಗಳು, ಅರಳಿನ ಹಿಟ್ಟು (ಪುರಿಹಿಟ್ಟು), ಅವಲಕ್ಕಿ, ಬಾಳೆಹಣ್ಣು, ಮೋದಕಗಳು, ತೆಂಗಿನಕಾಯಿ, ತುಪ್ಪ – ಈ ಎಂಟು ದ್ರವ್ಯಗಳ ಹೋಮದಲ್ಲಿ ಪ್ರೀತಿ ಉಳ್ಳವನಾದ್ದರಿಂದ ಅಷ್ಟದ್ರವ್ಯಹವಿಃಪ್ರಿಯನು.
ಓಂ ಅಷ್ಟದ್ರವ್ಯಹವಿಃಪ್ರಿಯಾಯ ನಮಃ

909. ಓಂ ನವನಾಗಾಸನಾಧ್ಯಾಸೀ-
ಭಾ: ನವನಾಗಾಸನಾಧ್ಯಾಸೀ ನಾಗೈಃ ಕರ್ಕೋಟಕಾದಿಭಿಃ|
ಪತ್ರೇಷ್ವಷ್ಟಸು ಮಧ್ಯೇ ಚ ಯಸ್ಯಾಸನಮಧಿಷ್ಠಿತಮ್‌||
ಕರ್ಕೋಟಕ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ, ಕಾಳಿಯ – ಎಂಬ ಮಹಾಸರ್ಪಗಳನ್ನು ನವನಾಗರೆನ್ನುತ್ತಾರೆ. ಇವರು ಗಣಪತಿ ಯಂತ್ರದ ಅಷ್ಟದಳಗಳಲ್ಲಿ ಇರುತ್ತಾರೆ. ಗಣಪತಿಯು ನವನಾಗಾಸನವಾದ ಯಂತ್ರದ ಅಧಿಷ್ಠಾನ ದೇವತೆಯಾಗಿದ್ದಾನೆ. ಆದ್ದರಿಂದ ಅವನು ನವನಾಗಾಸನಾಧ್ಯಾಸೀ.
(ಎಂಟು ದಳಗಳಲ್ಲಿ ಎಂಟು ಸರ್ಪಗಳು ಮಧ್ಯದಲ್ಲಿ ಒಂಬತ್ತನೆಯದಾದ ಕರ್ಕೋಟಕ ಸರ್ಪವು ಇರುತ್ತದೆ ಎಂದು ತಿಳಿಯಬೇಕು.)
ಓಂ ಅಷ್ಟದ್ರವ್ಯಹವಿಃಪ್ರಿಯಾಯ ನಮಃ
910. ಓಂ ನವನಿಧ್ಯನುಶಾಸಿತಾ-
ಭಾ: ಶಾಸಚ್ಛಂಖಮುಕುಂದಾದೀನ್ ನವನಿಧ್ಯನುಶಾಸಿತಾ|
ನವನಿಧಿಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡು ಅವುಗಳನ್ನು ನಾನಾ ಚಟುವಟಿಕೆಗಳಲ್ಲಿ ಆಜ್ಞಾಪಿಸುವುದರಿಂದ ಗಣೇಶನು ನವನಿಧ್ಯನುಶಾಸಿತನು.
ಓಂ ನವನಿಧ್ಯನುಶಾಸಿತ್ರೇ ನಮಃ
ನವದ್ವಾರಪುರಾಧಾರೋ ನವಾಧಾರನಿಕೇತನಃ|
ನವನಾರಾಯಣಸ್ತುತ್ಯೋ ||

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share