MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 169

247
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 169

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

911 . ಓಂ ನವದ್ವಾರಪುರಾಧಾರಾಯ ನಮಃ
912 . ಓಂ ನವಾಧಾರನಿಕೇತನಾಯ ನಮಃ
913 . ಓಂ ನವನಾರಾಯಣಸ್ತುತ್ಯಾಯ ನಮಃ
914 . ಓಂ ನವದುರ್ಗಾನಿಷೇವಿತಾಯ ನಮಃ
915 . ಓಂ ನವನಾಥಮಹಾನಾಥಾಯ ನಮಃ

911. ಓಂ ನವದ್ವಾರ ಪುರಾಧಾರಃ-
ಭಾ: ನವದ್ವಾರಪುರಾಧಾರೋ ಜೀವರೂಪೇಣ ದೇಹಭೃತ್‌|
ಎರಡು ಕಣ್ಣುಗಳು, ಎರಡು ಮೂಗಿನ ರಂಧ್ರಗಳು, ಎರಡು ಕಿವಿಗಳು, ಬಾಯಿ, ಗುದಸ್ಥಾನ, ಗುಹ್ಯಸ್ಥಾನಗಳೆಂಬ ಒಂಬತ್ತು ರಂಧ್ರ(ದ್ವಾರ)ಗಳಿರುವ ಶರೀರವೆಂಬ ನಗರಕ್ಕೆ ಜೀವರೂಪದಲ್ಲಿ ಆಧಾರಭೂತನಾಗಿರುವುದರಿಂದ ನವದ್ವಾರಪುರಾಧಾರನು.
ಓಂ ನವದ್ವಾರಪುರಾಧಾರಾಯ ನಮಃ

912. ಓಂ ನವಾಧಾರ ನಿಕೇತನಃ-
ಭಾ: ಕುಲಾಕುಲ ಸಹಸ್ರಾರೇ ಮೂಲಾದ್ಯಾಜ್ಞಾಂತಿಮಾನಿ ಷಟ್‌|
ಲಂಬಿಕೇತಿ ನವಸ್ವಾಸ್ಸೇ ನವಾಧಾರ ನಿಕೇತನಃ||
ಹೇ ಗಣೇಶ! ನೀನು ಕುಲಸಹಸ್ರ, ಅಕುಲಸಹಸ್ರ, ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧ, ಆಜ್ಞಾ, ಲಂಬಿಕಾಗಳೆಂಬ ಒಂಬತ್ತು ಚಕ್ರಗಳನ್ನು ನಿನ್ನ ವಾಸಸ್ಥಾನಗಳನ್ನಾಗಿ ಮಾಡಿಕೊಂಡಿದ್ದೀಯೆ. ಆದ್ದರಿಂದ ನೀನು ನವಾಧಾರನಿಕೇತನನು.
ಓಂ ನವಾಧಾರನಿಕೇತನಾಯ ನಮಃ

913. ಓಂ ನವನಾರಾಯಣಸ್ತುತ್ಯಃ-
ಭಾ: ಧರ್ಮಾದ್ಯನಂತ ಬದರೀ ರೂಪ ಶಂಕರ ಸುಂದರೈಃ|
ಲಕ್ಷ್ಮ್ಯಾ ಸಾಧ್ಯೇನೋಪ ಪದೈರ್ಯುಕ್ತಾ ನಾರಾಯಣಾ ನವ||
ನವ ನಾರಾಯಣ ಸ್ತುತ್ಯಃ ತೈಃ ಸ್ತುತ್ಯಃ ಸ ಭವಾನಿತಿ|
1. ಧರ್ಮನಾರಾಯಣ, 2. ಆದಿನಾರಾಯಣ, 3. ಅನಂತನಾರಾಯಣ, 4. ಬದರೀನಾರಾಯಣ, 5. ರೂಪನಾರಾಯಣ, 6. ಶಂಕರನಾರಾಯಣ, 7. ಸುಂದರನಾರಾಯಣ, 8. ಲಕ್ಷ್ಮೀನಾರಾಯಣ, 9. ಸಾಧ್ಯನಾರಾಯಣರೆಂಬ ನವನಾರಾಯಣರಿಂದ ಸ್ತುತಿಸಲ್ಪಡುವವನಾದ್ದರಿಂದ ನವನಾರಾಯಣಸ್ತುತ್ಯನು.
ಓಂ ನವನಾರಾಯಣಸ್ತುತ್ಯಾಯ ನಮಃ

914. ಓಂ ನವದುರ್ಗಾ ನಿಷೇವಿತಃ-
ಭಾ: ದುರ್ಗಾಯಾ ನವಕೂಷ್ಮಾಂಡ ಚಂದ್ರಘಂಟಾದಯೋsಭಿಧಾಃ|
ಪ್ರಸಿದ್ಧಾಸ್ತಾಭಿರೀಡ್ಯತ್ವಾನ್ನವದುರ್ಗಾ ನಿಷೇವಿತಃ||
ಪ್ರಥಮಂ ಶೈಲಪುತ್ರೀತಿ ದ್ವಿತೀಯಂ ಬ್ರಹ್ಮಚಾರಿಣೀ|
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಂ||
ಪಂಚಮಂ ಸ್ಕಂದಮಾತೇತಿ ಷಷ್ಠಂ ಕಾತ್ಯಾಯನೀತಿ ಚ|
ಸಪ್ತಮಂ ಕಾಲರಾತ್ರೀತಿ ಮಹಾಗೌರೀತಿ ಚಾಷ್ಟಮಂ||
ನವಮಂ ಸಿದ್ಧಿದಾ ಪ್ರೋಕ್ತಾ ನವದುರ್ಗಾಃ ಪ್ರಕೀರ್ತಿತಾಃ|
ಉಕ್ತಾನ್ಯೇತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ||
1. ಶೈಲಪುತ್ರಿ 2. ಬ್ರಹ್ಮಚಾರಿಣಿ 3. ಚಂದ್ರಘಂಟಾ 4. ಕೂಷ್ಮಾಂಡಾ 5. ಸ್ಕಂದಮಾತಾ 6. ಕಾತ್ಯಾಯನೀ 7. ಕಾಲರಾತ್ರಿ 8. ಮಹಾಗೌರಿ 9. ಸಿದ್ಧಿದಾತ್ರಿ ಇವರು ನವದುರ್ಗಿಯರು. ಗಣೇಶನು ನವದುರ್ಗಿಯರಿಂದ ಸೇವಿಸಲ್ಪಡುತ್ತಿದ್ದಾನೆ. ಆದ್ದರಿಂದ ನವದುರ್ಗಾನಿಷೇವಿತನು.
ಓಂ ನವದುರ್ಗಾನಿಷೇವಿತಾಯ ನಮಃ
ನವನಾಥಮಹಾನಾಥೋ ನವನಾಗವಿಭೂಷಣಃ|
ನವರತ್ನವಿಚಿತ್ರಾಂಗೋ ನವಶಕ್ತಿಶಿರೋಧೃತಃ||

915. ಓಂ ನವನಾಥಮಹಾನಾಥಃ-
ಭಾ: ಜ್ಞಾನಪ್ರಕಾಶ ಸತ್ಯಾನಂದ ವಿಮರ್ಶ ಸ್ವಭಾವ ಸುಭಗಾನಾಂ|
ನವನಾಥಮಹಾನಾಥೋ ನಾಥತ್ವಾತ್ಪ್ರತಿಭಪೂರ್ಣಯೋಶ್ಚ ಭವಾನ್‌||
ಆನಂದ, ನಾಥಗಳೆಂಬ ಎರಡು ಪದಗಳಿಂದ ಕೂಡಿದ 1. ಜ್ಞಾನ, 2. ಪ್ರಕಾಶ, 3. ಸತ್ಯ, 4. ಆನಂದ, 5. ವಿಮರ್ಶ, 6. ಸ್ವಭಾವ, 7. ಸುಭಗ, 8. ಪ್ರತಿಭ, 9. ಪೂರ್ಣರೆಂಬ ನವನಾಥರಿಗೆ ಗಣೇಶನು ಆದಿನಾಥನಾಗಿದ್ದಾನೆ. ಆದಕಾರಣ ಅವನು ನವನಾಥಮಹಾನಾಥನು. (ಜ್ಞಾನಾನಂದನಾಥ, ಪ್ರಕಾಶಾನಂದನಾಥ …….ಇತ್ಯಾದಿ ಪೂರ್ಣದೀಕ್ಷಾಪರರಾದ ನವನಾಥರು.)
ಓಂ ನವನಾಥಮಹಾನಾಥಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share