MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 180

246
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 180

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

971 . ಓಂ ಚತುರ್ನವತಿ ಮಂತ್ರಾತ್ಮನೇ ನಮಃ
972 . ಓಂ ಷಣ್ಣವತ್ಯಧಿಕಪ್ರಭವೇ ನಮಃ
973 . ಓಂ ಶತಾನಂದಾಯ ನಮಃ
974 . ಓಂ ಶತಧೃತಯೇ ನಮಃ
975 . ಓಂ ಶತಪತ್ರಾಯತೇಕ್ಷಣಾಯ ನಮಃ

971. ಓಂ ಚತುರ್ನವತಿಮಂತ್ರಾತ್ಮಾ-
ಭಾ: ಅಷ್ಟಾತ್ರಿಂಶತ್ಕಲಾ ಮಂತ್ರಾಃ ಪಂಚಾಶನ್ಮಾತೃಕಾಃ ಕಲಾಃ೤
ಹಂಸಶ್ಶುಚಿ ಪ್ರತದ್ವಿಷ್ಣುರ್ವಿಷ್ಣುರ್ಯೋನಿಂ ತ್ರಿಯಂಬಕಮ್‌೤೤
ತದ್ವಿಷ್ಣೋರ್ಮೂಲವಿದ್ಯೇತಿ ಚತುರ್ನವತಿ ಸಂಜ್ಞಕಾಃ೤
ದ್ರವ್ಯಶುದ್ಧ್ಯೆ ಕಲಾಸೂತ್ರೇ ಜಾಮದಗ್ನ್ಯೇನ ವರ್ಣಿತಾಃ೤
ಚತುರ್ನವತಿ ಮಂತ್ರಾತ್ಮಾ ತಾವನ್ಮಂತ್ರಾತ್ಮಕೋ ಭವಾನ್‌೤
ಪರಶುರಾಮನು ಕಲ್ಪಸೂತ್ರಗಳಲ್ಲಿ ದ್ರವ್ಯಶುದ್ಧಿಗಾಗಿ ವಿನಿಯೋಗಿಸುವ ತೊಂಬತ್ತನಾಲ್ಕು ಮಂತ್ರಗಳನ್ನು ತಿಳಿಸಿದ್ದಾನೆ. ಅಗ್ನಿ, ಸೂರ್ಯ, ಚಂದ್ರ, ಕಲಾ ಮಂತ್ರಗಳು ಮೂವತ್ತೆಂಟು, ಮಾತೃಕಾಮಂತ್ರಗಳು ಐವತ್ತು, ‘ಹಂಸಶ್ಶುಚಿಷದ್, ಪ್ರತದ್ವಿಷ್ಣುಃ, ವಿಷ್ಣುರ್ಯೋನಿವ್, ತ್ರ್ಯಂಬಕಂ ಯಜಾಮಹೇ, ತದ್ವಿಷ್ಣೋಃ, ಮೂಲವಿದ್ಯಾಮಂತ್ರಗಳೆಂಬ ಆರು ಮಂತ್ರಗಳು, ಒಟ್ಟು ಸೇರಿ, ತೊಂಬತ್ತನಾಲ್ಕು ದ್ರವ್ಯಶುದ್ಧಿಮಂತ್ರಗಳು. ಗಣೇಶನು ಈ ಎಲ್ಲಾಮಂತ್ರಗಳ ಆತ್ಮನಾಗಿದ್ದಾನೆ. ಆದ್ದರಿಂದ ಚತುರ್ನವತಿ ಮಂತ್ರಾತ್ಮನು.
ಓಂ ಚತುರ್ನವತಿ ಮಂತ್ರಾತ್ಮನೇ ನಮಃ
ಭಾ: ಪ್ರಾಚಾತು…ಚತುರ್ಗುಣಿತಾ ನವತಿಃ ಷಷ್ಟ್ಯಧಿಕತ್ರಿಶತೀ ವರ್ಷಸ್ಯ ತಾವದ್ದಿನಾನಿ ತದಾತ್ಮಕ ಇತಿ ವ್ಯಾಖ್ಯಾತಮ್‌೤ ತತ್ ಷಣ್ಣವತಿಸಂಖ್ಯಾಕನಾಮತಃ ಪೂರ್ವಂ ತಸ್ಯಾಃ ಸಂಖ್ಯಾಯಾ ಉಲ್ಲೇಖೇ ಸಂದರ್ಭ- ವಿರುದ್ಧಮ್, ಪ್ರಾಯೇಣ ಮಂತ್ರಶಾಸ್ತ್ರಸಂಪ್ರದಾಯವಿರುದ್ಧಾ ಏವಾರ್ಥಾ ಬಹುಷು ನಾಮಸು ತೇನ ಲಿಖಿತಾಸ್ತೇ ವಿಸ್ತರಭಯಾನ್ನಾಸ್ಮಾಭಿರನೂದ್ಯ ದೂಷಿತಾಃ, ದಿಜ್ಞ್ಮಾತ್ರಂ ತು ತತ್ರ ತತ್ರ ಪ್ರದರ್ಶಿತಮ್‌೤೤
ಪ್ರಾಚೀನ ವಿದ್ವಾಂಸನೊಬ್ಬನು ‘ಚತುರ್ನವತಿ ಮಂತ್ರಾತ್ಮಾ’ ಎಂಬ ನಾಮವನ್ನು ಚತುರ್ಗುಣಿತಾ ನವತಿ ಮಂತ್ರಾತ್ಮಾ ಎಂದು ವ್ಯಾಖ್ಯಾನಿಸಿದ್ದಾನೆ. ಗಣೇಶನು ಮುನ್ನೂರ ಅರವತ್ತು ಮಂತ್ರಗಳ ಸ್ವರೂಪನು ಹಾಗೂ ವರ್ಷದ ಮುನ್ನೂರ ಅರವತ್ತು ದಿನಗಳ ಸ್ವರೂಪನು ಎಂದೂ ಸಹ ಹೇಳಿದ್ದಾನೆ. ತೊಂಬತ್ತಾರು ಸಂಖ್ಯೆಯನ್ನು ಹೇಳುವುದಕ್ಕೆ ಮುಂಚೆಯೇ ಮುನ್ನೂರ ಅರವತ್ತು ಸಂಖ್ಯೆಯನ್ನು ಹೇಳುವುದು ಸಂದರ್ಭೋಚಿತವಾದುದಲ್ಲ. ಈ ನಾಮದ ನಂತರ ಷಣ್ಣವತ್ಯಧಿಕಪ್ರಭುಃ ಎಂದು ತೊಂಬತ್ತಾರು ಸಂಖ್ಯೆಯ ಉಲ್ಲೇಖವಿದೆ. ಆದ್ದರಿಂದ ಪ್ರಾಚೀನ ವಿದ್ವಾಂಸನ ವ್ಯಾಖ್ಯಾನವು ಸರಿಯಲ್ಲ ಎಂದು ತಿಳಿಯಬೇಕು. ಪ್ರಾಚೀನರು ಪ್ರಾಯಶಃ ಮಂತ್ರಶಾಸ್ತ್ರ ವಿರುದ್ಧವಾದ ವ್ಯಾಖ್ಯಾನವನ್ನೇ ರಚಿಸಿದ್ದಾರೆ. ಗ್ರಂಥವು ಬಹು ದೊಡ್ಡದಾಗುವುದೆಂಬ ಭಯದಿಂದ ಅವೆಲ್ಲವನ್ನೂ ಇಲ್ಲಿ ಎತ್ತಿತೋರಿಸಿ ಖಂಡಿಸುತ್ತಿಲ್ಲ. ಅಲ್ಲಲ್ಲಿ ಮಾತ್ರ ದಿಜ್ಞ್ಮಾತ್ರವಾಗಿ ಅವರ ತಪ್ಪುಗಳನ್ನು ತೋರಿಸಿ, ಖಂಡಿಸಿದ್ದೇವೆ.

972. ಓಂ ಷಣ್ಣವತ್ಯಧಿಕಪ್ರಭುಃ-
ಭಾ: ತಂತ್ರರಾಜೇ ಷಣ್ಣವತಿಃ ಪ್ರೋಕ್ತಾಃ ಶ್ರೀಚಕ್ರದೇವತಾಃ೤
ವಿದ್ಯಾ ಗಣೇಶಯೋರ್ಯೋಗಾ-ಜ್ಜಾಯಂತೇ7ಧಿಕದೇವತಾಃ೤೤
ತಾಸಾಮೀಶ ಸ್ಸಮಸ್ತಾನಾಂ ಷಣ್ಣವತ್ಯಧಿಕಪ್ರಭುಃ೤೤
ವಾಮಕೇಶ್ವರ ತಂತ್ರದ ಶ್ರೀಚಕ್ರದ ವರ್ಣನೆಯಲ್ಲಿ ತೊಂಬತ್ತಾರು ಮಂದಿ ದೇವತೆಗಳ ಉಲ್ಲೇಖವಿದೆ. ಆ ದೇವತೆಗಳೊಂದಿಗೆ ಶ್ರೀವಿದ್ಯಾ ದೇವತೆಯರು, ಗಣೇಶ, ಶಕ್ತಿದೇವತೆಯರು ಸೇರಿದರೆ ಇನ್ನೂ ಹೆಚ್ಚಿನ ದೇವತೆಯರಾಗುತ್ತಾರೆ. ಅವರೆಲ್ಲರಿಗೂ ಗಣೇಶನು ಪ್ರಭುವಾದ್ದರಿಂದ ಅವನು ಷಣ್ಣವತ್ಯಧಿಕಪ್ರಭುವು.
(ಶ್ರೀಚಕ್ರದಲ್ಲಿ ಮೊದಲನೆಯ ಆವರಣದಲ್ಲಿ ಅಣಿಮಾದಿ ಎಂಟು, ಬ್ರಾಹ್ಮ್ಯಾದಿ ಎಂಟು, ಸರ್ವಸಂಕ್ಷೋಭಿಣ್ಯಾದಿ ಹತ್ತುಮಂದಿ ದೇವತೆಯರು, ಎರಡನೆಯ ಆವರಣದಲ್ಲಿ ಕಾಮಾಕರ್ಷಿಣ್ಯಾದಿ ಹದಿನಾರು ಮಂದಿ ದೇವತೆಯರು, ಮೂರನೆಯ ಆವರಣದಲ್ಲಿ ಅನಂಗ ಕುಸುಮಾದಿ ಎಂಟು ಮಂದಿ ದೇವತೆಯರು, ನಾಲ್ಕನೆಯ ಆವರಣದಲ್ಲಿ ಸರ್ವಸಂಕ್ಷೋಭಿಣ್ಯಾದಿ ಹದಿನಾಲ್ಕು ಮಂದಿ ದೇವತೆಯರು, ಐದನೆಯ ಆವರಣದಲ್ಲಿ ಸರ್ವಸಿದ್ಧಿಪ್ರದಾದಿ ಹತ್ತು ಮಂದಿ ದೇವತೆಯರು, ಆರನೆಯ ಆವರಣದಲ್ಲಿ ಸರ್ವಜ್ಞಾದಿ ಹತ್ತು ಮಂದಿ ದೇವತೆಯರು, ಏಳನೆಯ ಆವರಣದಲ್ಲಿ ವಶಿನ್ಯಾದಿ ಎಂಟು ಮಂದಿ ದೇವತೆಯರು, ಎಂಟನೆಯ ಆವರಣದಲ್ಲಿ ಸರ್ವಜಂಭನ ಬಾಣಶಕ್ತ್ಯಾದಿ ನಾಲ್ಕು ಮಂದಿ ದೇವತೆಯರು ಇರುತ್ತಾರೆ. ಒಂಬತ್ತನೆಯ ಆವರಣದಲ್ಲಿ ನಿರ್ಗುಣ ಪರಬ್ರಹ್ಮ ಸ್ವರೂಪಿಣಿಯಾದ ರಾಜರಾಜೇಶ್ವರೀಮಾತೆಯು ಇರುತ್ತಾಳೆ.
ಒಂಬತ್ತನೆಯದಾದ ಬಿಂದುಸ್ಥಾನವನ್ನು ತೊರೆದು ಒಳಿದ ಎಂಟು ಆವರಣದೇವತೆಯರನ್ನು ಕೂಡಿಸಿದರೆ ತೊಂಬತ್ತಾರು ಸಂಖ್ಯೆ ಬರುವುದು.)
ಓಂ ಷಣ್ಣವತ್ಯಧಿಕಪ್ರಭವೇ ನಮಃ
ಶತಾನಂದ ಶ್ಶತಧೃತಿಃ ಶತಪತ್ರಾಯತೇಕ್ಷಣಃ೤
ಶತಾನೀಕ ಶ್ಶತಮಖಃ ಶತಧಾರಾವರಾಯುಧಃ೤೤

973. ಓಂ ಶತಾನಂದಃ-
ಭಾ: ಶತಾನಂದ ಶ್ಶತಗುಣಾ ಆನಂದಾ ಮಾನುಷಾದಯಃ೤
ಬ್ರಹ್ಮಾನಂದಾದಿಮಾ ಯೇ ಯೇ ತೇ ಸರ್ವೇಪಿ ತದಾತ್ಮಕಾಃ೤೤
ಮಾನುಷಾನಂದದಿಂದ ಬ್ರಹ್ಮಾನಂದದವರೆಗಿರುವ ಆನಂದಗಳು ಒಂದಕ್ಕಿಂತ ಒಂದು ನೂರರಷ್ಟು ಹೆಚ್ಚಾಗಿವೆ ಎಂದು ತೈತ್ತಿರೀಯ ಉಪನಿಷತ್ತು ಹೇಳುತ್ತದೆ.
ಆ ಆನಂದಗಳೆಲ್ಲವೂ ಗಣೇಶನ ರೂಪಗಳೇ ಆಗಿವೆ. ಗಣೇಶನೇ ಆ ಆನಂದಗಳಿಗೆ ಆತ್ಮನಾಗಿದ್ದಾನೆ. ಆದ್ದರಿಂದ ಅವನು ಶತಾನಂದನು. (ಅಕಾಮಹತಶ್ರೋತ್ರಿಯನಿಗೆ ಆಗುವ ಮೊದಲನೆಯ ಆನಂದ ಮಾನುಷಾನಂದ. ಅದರ ನೂರರಷ್ಟು ಮನುಷ್ಯಗಂಧರ್ವ ಆನಂದ. ಅದರ ನೂರರಷ್ಟು ದೇವಗಂಧರ್ವ ಆನಂದ. ಅದರ ನೂರರಷ್ಟು ಚಿರಲೋಕಪಿತೃ ಆನಂದ. ಅದರ ನೂರರಷ್ಟು ಆಜಾನಜದೇವತಾನಂದ. ಅದರ ನೂರರಷ್ಟು ಕರ್ಮದೇವತಾನಂದ. ಅದರ ನೂರರಷ್ಟು ದೇವತಾನಂದ. ಅದರ ನೂರರಷ್ಟು ಇಂದ್ರನ ಆನಂದ. ಅದರ ನೂರರಷ್ಟು ಬೃಹಸ್ಪತಿಯ ಆನಂದ. ಅದರ ನೂರರಷ್ಟು ಪ್ರಜಾಪತಿಯ ಆನಂದ. ಅದರ ನೂರರಷ್ಟು ಬ್ರಹ್ಮಾನಂದ.)
ಓಂ ಶತಾನಂದಾಯ ನಮಃ

974. ಓಂ ಶತಧೃತಿಃ-
ಭಾ: ಬ್ರಹ್ಮಾಂಡಾನಾಮನಂತಾನಾಂ ಧರ್ತಾ ಶತಧೃತಿರ್ಭವಾನ್‌೤
ಹೇ ಗಣೇಶ! ಅನಂತ ಬ್ರಹ್ಮಾಂಡಗಳನ್ನು ಧರಿಸುವುದರಿಂದ ನೀನು ಶತಧೃತಿಯು.
ಓಂ ಶತಧೃತಯೇ ನಮಃ

975. ಓಂ ಶತಪತ್ರಾಯತೇಕ್ಷಣಃ-
ಭಾ: ಪದ್ಮಪತ್ರಾಯತಾಕ್ಷಸ್ತ್ವಂ ಶತಪತ್ರಾಯತೇಕ್ಷಣಃ೤
ಹೇ ಗಣೇಶ! ನಿನ್ನ ನೇತ್ರಗಳು ಪದ್ಮಪತ್ರಗಳಂತೆ ದೀರ್ಘವಾಗಿರುವುದರಿಂದ ನೀನು ಶತಪತ್ರಾಯತೇಕ್ಷಣನು.
ಓಂ ಶತಪತ್ರಾಯತೇಕ್ಷಣಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share