MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 30

280
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 30

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

151 . ಓಂ ಸಾಮಬೃಂಹಿತಾಯ ನಮಃ
152 . ಓಂ ಗ್ರಹರ್ಕ್ಷದಶನಾಯ ನಮಃ
153 . ಓಂ ವಾಣೀಜಿಹ್ವಾಯ ನಮಃ
154 . ಓಂ ವಾಸವನಾಸಿಕಾಯ ನಮಃ
155 . ಓಂ ಕುಲಾಚಲಾಂಸಾಯ ನಮಃ

151. ಓಂ ಸಾಮಬೃಂಹಿತಃ-
ಭಾ: ಯದ್ಬೃಂಹಿತಂ ಸಾಮವೇದಃ ಸಪ್ರೋಕ್ತಃ ಸಾಮಬೃಂಹಿತಃ ।

ಯಾವ ದೇವನ ಗರ್ಜನೆಯು ಸಾಮವೇದದ ರೂಪವನ್ನು ತಾಳುತ್ತದೆಯೋ ಅವನು ಸಾಮಬೃಂಹಿತನು.
ಭಾ: ಯತ್ತು ಸ್ತೋತ್ರಾತ್ಮಕೈಃ ಸಾಮಭಿಃ ತೋಷಿತ ಇತಿ ಪ್ರಾಚಾಮರ್ಥೋ ವಿರಾಟ್ ಪುರುಷ ರೂಪವರ್ಣನ ಪ್ರಕರಣಾನನುಗುಣತ್ವಾದ್ರೂಪಕಸಮಾಸ ಪ್ರಾಯಪಾಠಸ್ವಾರಸ್ಯ ವಿರೋಧಾತ್, ಗಜಗರ್ಜಿತವಾಚಕಬೃಂಹಿತ ಪದಶಕ್ಯಾರ್ಥತ್ಯಾಗಾಚ್ಚ ನೋಪಾದೇಯಃ ॥

ಕೆಲವರು ಪ್ರಾಚೀನ ಪಂಡಿತರು ಸಾಮಬೃಂಹಿತನೆಂಬ ನಾಮಕ್ಕೆ ಸ್ತೋತ್ರರೂಪಗಳಾದ ಸಾಮಗಳಿಂದ ಸಂತುಷ್ಟನು ಎಂದು ಅರ್ಥವನ್ನು ಹೇಳಿದ್ದಾರೆ. ಆದರೆ ಅದು ಸರಿಯಲ್ಲ. ಪ್ರಕರಣವನ್ನು ನೋಡಿದಾಗ ಇದು ಸ್ವಾಮಿಯ ವಿರಾಡ್ರೂಪವನ್ನು ವರ್ಣಿಸುವಂತಹ ಸಂದರ್ಭ ಎಂದು ಗೊತ್ತಾಗುತ್ತದೆ. ಆದ್ದರಿಂದ ಪ್ರಾಚೀನರ ಅರ್ಥವು ಸರಿಯಲ್ಲ.
ಗಿರೀಂದ್ರೈಕರದ, ಧರ್ಮಾಧರ್ಮೋಷ್ಠ ಹೀಗೆ ರೂಪಕ ಸಮಾಸಗಳಿಂದ ಕೂಡಿದ ಪದಗಳ ಮಧ್ಯದಲ್ಲಿ ಪ್ರಸ್ತುತ ಪದವು ಇರುವುದರಿಂದ ಇದಕ್ಕೂ ಕೂಡ ರೂಪಕ ಸಮಾಸಾರ್ಥವನ್ನು ಹೇಳುವುದರಲ್ಲಿಯೇ ಸ್ವಾರಸ್ಯವಿರುತ್ತದೆ.
ಬೃಂಹಿತ ಎಂಬ ಪದಕ್ಕೆ ಆನೆಯ ಘೀಂಕಾರವೇ ಅರ್ಥವಾಗಿದೆ. ಆ ಶಕ್ಯಾರ್ಥವನ್ನು ತೊರೆದು ಬೇರೆಯ ಅರ್ಥವನ್ನು ಹೇಳುವುದು ಕೂಡಾ ದೋಷವೇ ಆಗಿರುತ್ತದೆ. ಈ ಎಲ್ಲಾ ಕಾರಣಗಳಿಂದಲೂ ಪ್ರಾಚೀನ ಪಂಡಿತರ ಅಭಿಪ್ರಾಯವು ಸರಿಯಲ್ಲವೆಂದು ತಿಳಿದು ಅದನ್ನು ಗ್ರಹಿಸಬೇಕಿಲ್ಲ.
ಓಂ ಸಾಮಬೃಂಹಿತಾಯ ನಮಃ

152. ಓಂ ಗ್ರಹರ್ಕ್ಷದಶನಃ-
ಭಾ: ಸೂರ್ಯಾದಯೋಗ್ರಹಾ ಯಸ್ಯ ಕೃತ್ತಿಕಾದ್ಯಾಶ್ಚ ತಾರಕಾಃ ।
ಮುಖಾಂತಸ್ಥಾಃ ಸೂಕ್ಷ್ಮದಂತೋ ಗ್ರಹರ್ಕ್ಷದಶನೋ ಹಿ ಸಃ ॥

ಸೂರ್ಯನು ಮೊದಲಾದ ಗ್ರಹಗಳು, ಕೃತ್ತಿಕಾ ಮೊದಲಾದ ನಕ್ಷತ್ರಗಳು ಗಣೇಶನ ಮುಖದೊಳಗಿನ ಸೂಕ್ಷ್ಮದಂತಗಳಾಗಿವೆ. ಆದ್ದರಿಂದ ಅವನು ಗ್ರಹರ್ಕ್ಷದಶನನು. (ಆನೆಯ ಹೊರಗಿನ ಎರಡು ದಂತಗಳು ಬಹಿರ್ದಂತಗಳು. ಬಾಯೊಳಗಿರುವ ದಂತಗಳು ಅಂತರ್ದಂತಗಳು. ಅಥವಾ ಸೂಕ್ಷ್ಮ ದಂತಗಳು)
ಓಂ ಗ್ರಹರ್ಕ್ಷದಶನಾಯ ನಮಃ

153. ಓಂ ವಾಣೀಜಿಹ್ವಃ-
ಭಾ: ಪುರಾಣನ್ಯಾಯಮೀಮಾಂಸಾ7ಥರ್ವ ಋಗ್ಯಜುಷಾದಿಕಾಃ ।
ವಾಕ್ತತೀ ರಸನಾ ಯಸ್ಯ ಸ ವಾಣೀಜಿಹ್ವ ಉಚ್ಯತೇ ॥

ಯಾರ ನಾಲಿಗೆಯು ಪುರಾಣಗಳು, ನ್ಯಾಯಮೀಮಾಂಸಾದಿ ಶಾಸ್ತ್ರಗಳು, ಅಥರ್ವ, ಋಕ್, ಯಜುಸ್ ಎಂಬ ವೇದಗಳ ರೂಪವಾಗಿದೆಯೋ ಅವನು ವಾಣೀಜಿಹ್ವನಾಗಿದ್ದಾನೆ.
ಓಂ ವಾಣೀಜಿಹ್ವಾಯ ನಮಃ

154. ಓಂ ವಾಸವ ನಾಸಿಕಃ-
ಭಾ: ನಾಸಾ ಯಸ್ಯ ಸುನಾಸೀರಃ ಸೋಯಂ ವಾಸವ ನಾಸಿಕಃ ।

ದೇವೇಂದ್ರನೇ ವಿಶ್ವರೂಪ ಗಣೇಶನ ನಾಸಿಕ (ಮೂಗು) ವಾಗಿದ್ದಾನೆ. ಆದ್ದರಿಂದ ಅವನು ವಾಸವನಾಸಿಕನು. (ಸುನಾಸೀರ – ದೇವೇಂದ್ರ)
ಓಂ ವಾಸವನಾಸಿಕಾಯ ನಮಃ
ಕುಲಾಚಲಾಂಸ ಸ್ಸೋಮಾರ್ಕಘಂಟೋ ರುದ್ರಶಿರೋಧರಃ ।
ನದೀನದ ಭುಜ ಸ್ಸರ್ಪಾಂಗುಳೀಕ ಸ್ತಾರಕಾನಖಃ॥

155. ಓಂ ಕುಲಾಚಲಾಂಸಃ-
ಭಾ: ಕುಲಾಚಲಾಂಸೋ ವಿಂಧ್ಯಾದ್ಯಾ ಯಸ್ಯ ಸ್ಕಂಧತಯಾ ಮತಾಃ ।

ವಿಂಧ್ಯಾದಿ ಪರ್ವತಗಳು ಯಾವನ ಹೆಗಲುಗಳೆಂದು ಹೇಳುತ್ತಾರೆಯೋ ಅವನು ಕುಲಾಚಲಾಂಸನು.
ಓಂ ಕುಲಾಚಲಾಂಸಾಯ ನಮಃ

( ಮುಂದುವರೆಯುವುದು )

( ಸಂಗ್ರಹ )
* ಭಾಲರಾ
ಬೆಂಗಳೂರು


Share