MP : ಆಧ್ಯಾತ್ಮಿಕ ಅಂಗಳ : ಶ್ರೀ ಗಣೇಶ ಸಹಸ್ರನಾಮಾವಳಿಯ ಅರ್ಥ( ಭಾಷ್ಯ ) : ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ – ಪುಟ – 183

246
Share

ಶ್ರೀ ಗಣೇಶ ಸಹಸ್ರನಾಮ ಭಾಷ್ಯ : ಪುಟ – 183

ಸಂಸ್ಕೃತದಿಂದ ಕನ್ನಡಾನುವಾದ :
ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ,
ಅವಧೂತ ದತ್ತ ಪೀಠಂ,
ಮೈಸೂರು .

ಶ್ರೀ ಗಣೇಶ ಸಹಸ್ರ ನಾಮಾವಳಿಯ ಅರ್ಥವನ್ನು MP ( ಮೈಸೂರು ಪತ್ರಿಕೆ ) -ಆಧ್ಯಾತ್ಮಿಕ ಅಂಗಳದ ಅಂಕಣದಲ್ಲಿ ಪ್ರಕಟಿಸುವ ಪ್ರಯತ್ನವನ್ನು ಮಾಡಲು ಮುಂದಾಗಿದೆ ಎಂದು ತಿಳಿಸಲು ಹರ್ಷಿಸುತ್ತದೆ . ಗಣೇಶನ ಸಹಸ್ರನಾಮಾದ ಅರ್ಥ ಓದುವುದರ ಮೂಲಕ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿ ಎಂದು ಆಶಿಸುತ್ತೇವೆ . ( ಸಂಪಾದಕ )

ಇಂದಿನ ನಾಮಾವಳಿಗಳು :

986 . ಓಂ ದಶಸಾಹಸ್ರಫಣಭೃತ್ಫಣಿರಾಜಕೃತಾಸನಾಯ ನಮಃ
987 . ಓಂ ಅಷ್ಟಾಶೀತಿಸಹಸ್ರಾದ್ಯಮಹರ್ಷಿಸ್ತೋತ್ರಯಂತ್ರಿತಾಯ ನಮಃ
988 . ಓಂ ಲಕ್ಷಾಧೀಶಪ್ರಿಯಾಧಾರಾಯ ನಮಃ
989 . ಓಂ ಲಕ್ಷಾಧಾರಮನೋಮಯಾಯ ನಮಃ
990 . ಓಂ ಚತುರ್ಲಕ್ಷಜಪಪ್ರೀತಾಯ ನಮಃ

986. ಓಂ ದಶಸಾಹಸ್ರಫಣಭೃತ್ಫಣಿರಾಜಕೃತಾಸನಃ೤
ಭಾ: ದಶಸಾಹಸ್ರಫಣಭೃ-ತ್ಫಣಿರಾಜಕೃತಾಸನಃ೤
ಇಚ್ಛಯಾಸೃಷ್ಟಿ ನಿರ್ಮಾತುಃ ಕಿಮಸಾಧ್ಯಂ ತವ ಪ್ರಭೋ೤೤
ಹೇ ಗಣೇಶ! ಹತ್ತು ಸಾವಿರ ಹೆಡೆಗಳುಳ್ಳ ನಾಗರಾಜನಾದ ಆದಿಶೇಷನೇ ನಿನಗೆ ಸಿಂಹಾಸನವಾಗಿದ್ದಾನೆ. ಸ್ವೇಚ್ಛೆಯಿಂದ ಸೃಷ್ಟಿ ಮಾಡುವ ನಿನಗೆ ಅಸಾಧ್ಯ-ವೆಂಬುದೇ ಇಲ್ಲವಾಗಿದೆ ಪ್ರಭೂ!
ಓಂ ದಶಸಾಹಸ್ರಫಣಭೃತ್ಫಣಿರಾಜಕೃತಾಸನಾಯ ನಮಃ
ಅಷ್ಟಾಶೀತಿ ಸಹಸ್ರಾದ್ಯ ಮಹರ್ಷಿ ಸ್ತೋತ್ರ ಯಂತ್ರಿತಃ೤
ಲಕ್ಷಾಧೀಶ ಪ್ರಿಯಾಧಾರೋ ಲಕ್ಷಾಧಾರ ಮನೋಮಯಃ೤೤

987. ಓಂ ಅಷ್ಟಾಶೀತಿ ಸಹಸ್ರಾದ್ಯ ಮಹರ್ಷಿ ಸ್ತೋತ್ರ ಯಂತ್ರಿತಃ-
ಭಾ: ಸರ್ವವಿದ್ಯಾ ಕಲಾರಾಶಿ ರಕ್ಷಣೈಕ ಪ್ರಯೋಜನಾಃ೤
ವಿಷ್ಣುನಾ ಹಿಮವತ್ಪ್ರುಷ್ಠೇ ಸ್ಥಾಪಿತಾ ಗೃಹಮೇಧಿನಃ೤೤
ಪುರಾಣೇ ವೈಷ್ಣವೇ ಪ್ರೋಕ್ತಾಸ್ತೈಃ ಸ್ತುತ್ಯೋ7ಸಿ ನಿಯಂತ್ರಿತಃ೤
ಅಷ್ಟಾಶೀತಿಸಹಸ್ರಾದ್ಯಮಹರ್ಷಿಸ್ತೋತ್ರಯಂತ್ರಿತಃ೤
ಸಕಲ ವಿದ್ಯೆಗಳ ಹಾಗೂ ಕಲೆಗಳ ರಕ್ಷಣೆಗಾಗಿ ಶ್ರೀಹರಿಯು ಎಂಬತ್ತೆಂಟು ಸಾವಿರ ಮಂದಿ ಗೃಹಸ್ಥ ಋಷಿಗಳನ್ನು ಹಿಮವತ್ಪರ್ವತದ ಪೃಷ್ಠಭಾಗದಲ್ಲಿ ಸ್ಥಾಪಿಸಿದನು ಎಂದು ವಿಷ್ಣುಪುರಾಣದಲ್ಲಿ ಹೇಳಲ್ಪಟ್ಟಿದೆ. ಗಣೇಶನು ಆ ಎಲ್ಲಾ ಋಷಿಗಳಿಂದಲೂ ಸ್ತುತಿಸಲ್ಪಟ್ಟಿದ್ದಾನೆ. ಆದ್ದರಿಂದ ಅಷ್ಟಾಶೀತಿಸಹಸ್ರಾದ್ಯಮಹರ್ಷಿಸೋತ್ರಯಂತ್ರಿತನು.
(ಶ್ರೀಹರಿಯು ಹಿಮವತ್ಪರ್ವತದಲ್ಲಿ ಇರಿಸಿದ ಋಷಿಗಳನ್ನು ಆದ್ಯಮಹರ್ಷಿ-ಗಳೆನ್ನುತ್ತಾರೆ.)
ಓಂ ಅಷ್ಟಾಶೀತಿಸಹಸ್ರಾದ್ಯಮಹರ್ಷಿಸ್ತೋತ್ರಯಂತ್ರಿತಾಯ ನಮಃ

988. ಓಂ ಲಕ್ಷಾಧೀಶಪ್ರಿಯಾಧಾರಃ-
ಭಾ: ಲಕ್ಷಾಧೀಶಪ್ರಿಯಾಧಾರೋ ಲಕ್ಷಾಧೀಶಾ ಧನೇಶ್ವರಾಃ೤
ತೇಷಾಂ ಪ್ರಿಯಸ್ಸನ್ನಾಧಾರೋ ಧನವೃದ್ಧ್ಯರ್ಥಮಾಶ್ರಿತಃ೤೤
ಲಕ್ಷಾಧೀಶರೆಂದರೆ ಧನವಂತರು. ಅವರಿಗೆ ಗಣೇಶನು ಪ್ರಿಯನಾದ್ದರಿಂದ ಅವರು ಗಣೇಶನನ್ನು ತಮ್ಮ ಐಶ್ವರ್ಯವನ್ನು ಹೆಚ್ಚಿಸಿಕೊಳ್ಳಲು ಆಶ್ರಯಿಸಿದ್ದಾರೆ. ಗಣೇಶನು ಧನವಂತರಿಗೆ ಆಧಾರಭೂತನಾಗಿದ್ದಾನೆ. ಆದ್ದರಿಂದ ಲಕ್ಷಾಧೀಶಪ್ರಿಯಾಧಾರನು.
ಓಂ ಲಕ್ಷಾಧೀಶಪ್ರಿಯಾಧಾರಾಯ ನಮಃ

989. ಓಂ ಲಕ್ಷಾಧಾರಮನೋಮಯಃ-
ಭಾ: ಲಕ್ಷಾಣಿ ಚಿತ್ತಸ್ಥೈರ್ಯಾರ್ಥಂ ಪ್ರಸಿದ್ಧಾನಿ ತದಾಶ್ರಿತಂ೤
ಮನೋ ಯಸ್ಯ ತದಾತ್ಮಾ ತ್ವಂ ಲಕ್ಷಾಧಾರಮನೋಮಯಃ೤೤
ಚಿತ್ತಸ್ಥೈರ್ಯವನ್ನು ಸಂಪಾದಿಸಲು ಲಕ್ಷಗಟ್ಟಲೆ ಸಾಧನೋಪಾಯಗಳಿವೆ. ಅವುಗಳಿಂದ ಚಿತ್ತಸ್ಥೈರ್ಯವನ್ನು ಸಂಪಾದಿಸಿದ ಸಾಧಕರ ಸ್ವರೂಪವೇ ತಾನಾದ್ದರಿಂದ ಗಣೇಶನು ಲಕ್ಷಾಧಾರಮನೋಮಯನು.
(ಚಿತ್ತಸ್ಥೈರ್ಯ- ಏಕಾಗ್ರತೆ)
ಓಂ ಲಕ್ಷಾಧಾರಮನೋಮಯಾಯ ನಮಃ
ಚತುರ್ಲಕ್ಷಜಪಪ್ರೀತ – ಶ್ಚತುರ್ಲಕ್ಷಪ್ರಕಾಶಿತಃ೤
ಚತುರಶೀತಿ ಲಕ್ಷಾಣಾಂ ಜೀವಾನಾಂ ದೇಹಸಂಸ್ಥಿತಃ೤೤
ಕೋಟಿ ಸೂರ್ಯ ಪ್ರತೀಕಾಶಃ ಕೋಟಿ ಚಂದ್ರಾಂಶು ನಿರ್ಮಲಃ೤

990. ಓಂ ಚತುರ್ಲಕ್ಷ ಜಪಪ್ರೀತಃ-
ಭಾ: ಚತುರ್ಲಕ್ಷ ಜಪಪ್ರೀತಃ ಪುರಶ್ಚರ್ಯಾ ಹಿ ಸಾ ಮನೋಃ
ಪುರಶ್ಚರ್ಯಾ ರೂಪದಲ್ಲಿ ತನ್ನ ಮಂತ್ರವನ್ನು ನಾಲ್ಕು ಲಕ್ಷಸಾರಿ ಜಪಿಸಿದವರನ್ನು ಸಂತೋಷದಿಂದ ಅನುಗ್ರಹಿಸುತ್ತಾನೆ. ಆದ್ದರಿಂದ ಚತುರ್ಲಕ್ಷಜಪಪ್ರೀತನು.
(ಪುರಶ್ಚರಣ ಅಥವಾ ಪುರಶ್ಚರ್ಯ ಮಂತ್ರಸಿದ್ಧಿಗಾಗಿ ಮಾಡುವ ಮೊದಲನೆಯ ಸಾಧನೆ, ಮಂತ್ರದ ಅಕ್ಷರಲಕ್ಷ ಸಂಖ್ಯೆಯು ಪೂರ್ತಿಯಾಗುವವರೆಗೂ ಪುನಃ ಪುನಃ ಜಪಿಸುವುದು.
ಜೀವ ಹೀನೋ ಯಥಾ ದೇಹೀ ಸರ್ವ ಕರ್ಮಸು ನ ಕ್ಷಮಃ
ಪುರಶ್ಚರಣಹೀನೋ7ಪಿ ತಥಾ ಮಂತ್ರಃ ಪ್ರಕೀರ್ತಿತಃ)
1. ಓಂ ಹ್ರಾಂ ಹ್ರೀಂ ಹ್ರೀಂ, 2. ಓಂ ಹ್ರೀಂ ಗಂ ಹ್ರೀಂ, 3. ಓಂ ಗೂಂ ನಮಃ, 4. ಓಂ ಠಾಂ ನಮಃ – ಎಂಬ ಈ ನಾಲ್ಕು ಮಂತ್ರಗಳು ಗಣೇಶ ಚತುರಕ್ಷರೀ ಮಂತ್ರಗಳು. ಇವುಗಳನ್ನು ಉಪದೇಶ ಪಡೆದು ಒಂದೊಂದನ್ನೂ ನಾಲ್ಕು ಲಕ್ಷಬಾರಿ ಜಪಿಸಿದರೆ ಗಣೇಶನು ಪ್ರಸನ್ನನಾಗುತ್ತಾನೆ.
ಓಂ ಚತುರ್ಲಕ್ಷಜಪಪ್ರೀತಾಯ ನಮಃ

( ಮುಂದುವರೆಯುವುದು )

( ಸಂಗ್ರಹ )

* ಭಾಲರಾ
ಬೆಂಗಳೂರು


Share