MP – ಆಧ್ಯಾತ್ಮಿಕ ಅಂಗಳ : 23-07-2021 : ಶ್ರೀಪಾದ ವಲ್ಲಭರ ಚರಿತ್ರೆ : ಪುಟ – 2699

300
Share

 

ಶ್ರೀಪಾದ ಶ್ರೀವಲ್ಲಭರ ದಿವ್ಯಚರಿತಾಮೃತ –
ಅಧ್ಯಾಯ 48
ಪುಟ – 269

॥ ಶ್ರೀಪಾದರಾಜಂ ಶರಣಂ ಪ್ರಪದ್ಧೇ ॥
॥ ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ॥

ಪಂಚದೇವ ಪಹಾಡಿನಲ್ಲಿ ದರ್ಬಾರು ವಿವರಣೆ

ಶ್ರೀಪಾದರವರು ಸ್ತ್ರೀ , ಪುರುಷರನ್ನು ಸಂಬೋಧಿಸುವ ವಿಧಾನ

ಶ್ರೀಪಾದರು ಸಾಧಾರಣವಾಗಿ ಗುರುವಾರದ ದಿನ ಪಂಚದೇವ ಪಹಾಡಿನಲ್ಲಿ ದರ್ಬಾರು ಮಾಡುತ್ತಿದ್ದರು . ಶ್ರೀಪಾದರು ಕೃಷ್ಣಾ ನದಿಯ ನೀರಿನ ಮೇಲೆ ಹೆಜ್ಜೆಗಳಿಡುತ್ತಾ ಹೊರಡುವರು . ಅವರು ಹೆಜ್ಜೆಯಿಡುವ ಜಾಗದಲ್ಲಿ ಪದ್ಮವು ಉದಯಿಸುವುದು . ಆ ಪದ್ಮದ ಮೇಲೆ ಮರದ ಪಾದುಕೆಗಳು ಯಾವ ರೀತಿಯಲ್ಲಿ ನಿಲ್ಲುತ್ತಿದ್ದವೋ ಮಾನವನ ಊಹೆಗೆ ಮೀರಿದ ವಿಷಯ . ಅಷ್ಟೇ ಅಲ್ಲದೆ ನೀರಿನ ಮೇಲೆ ನಡೆಯುವುದೇ ಒಂದು ಆಶ್ಚರ್ಯ . ಸ್ವಲ್ಪ ಕಾಲ ಇದು ನೋಡುವವರಿಗೆ ಆಶ್ಚರ್ಯವನ್ನುಂಟು ಮಾಡುತ್ತಿತ್ತು . ಆಮೇಲೆ ಅದು ಸಾಧಾರಣ ಲೀಲೆಯಾಗಿ ಪರಿಗಣಿಸಲ್ಪಟ್ಟಿತು . ಶ್ರೀಪಾದರು ಈ ರೀತಿಯಾಗಿ ಕೃಷ್ಣೆಯ ಆಚೆದಡಕ್ಕೆ ಬರುತ್ತಿರುವಾಗ ಅವರ ಭಕ್ತರು ಆದರದಿಂದ ಎದುರು ನಿಂತು ಸ್ವಾಗತವನ್ನು ಹೇಳುತ್ತಿದ್ದರು . ಸಾಯಂಕಾಲದವರೆಗೂ ದರ್ಬಾರು ನಡೆಯುತ್ತಿತ್ತು . ಆ ತರುವಾಯ ಅವರು ಅದೇ ರೀತಿಯಾಗಿ ಕೃಷ್ಣೆಯನ್ನು ದಾಟುತ್ತಿದ್ದರು . ನೀರಿನ ಮೇಲೆ ಅವರು ಹೆಜ್ಜೆ ಇಡುವೆಡೆ ಉದಯಿಸುತ್ತಿದ್ದ ಕಮಲದ ಮೇಲೆ ನಡೆದು ಹೋಗುತ್ತಿದ್ದರು . ಆಗ ಭಕ್ತರೆಲ್ಲರೂ ಅವರನ್ನು ಬೀಳ್ಕೊಡುತ್ತಿದ್ದರು . ರಾತ್ರಿಯ ಹೊತ್ತು ಕುರುಗಡ್ಡೆಯಲ್ಲಿ ಒಬ್ಬಂಟಿಗರಾಗಿಯೇ ಇರುತ್ತಿದ್ದರು . ಪ್ರತಿ ಶುಕ್ರವಾರ ಅವರು , ವಿವಾಹವಾಗಬೇಕಾಗಿರುವ ಕನ್ಯೆಯರಿಗೆ , ಸೌಭಾಗ್ಯವನ್ನು ಅಪೇಕ್ಷಿಸುತ್ತಿದ್ದ ಮಹಿಳೆಯರಿಗೆ ಅರಿಶಿನ ಕುಂಕುಮವನ್ನು ಕೊಡುತ್ತಿದ್ದರು . ತನಗಿಂತ ದೊಡ್ಡವರಾದ ಮಹಿಳೆಯನ್ನು ಅಮ್ಮಾ ! ಸುಮತಿ ! ಎಂದೂ , ಒಮ್ಮೊಮ್ಮೆ ಅಮ್ಮಾ ! ಅನುಸೂಯಮ್ಮ ತಾಯಿ ! ಎಂದೂ ಸಂಬೋಧಿಸುತ್ತಿದ್ದರು . ತನಗಿಂತ ಚಿಕ್ಕವರಾದ ಸ್ತ್ರೀಯರನ್ನು ಸಾಧಾರಣವಾಗಿ ಅಮ್ಮಾ ! ವಾಸವಿ ! ಎಂದೋ , ಅಮ್ಮಾ ! ವಿದ್ಯಾಧರಿ ! ಎಂದೋ , ಅಮ್ಮಾ ! ರಾಧ ಎಂದೋ , ಅಮ್ಮಾ ! ಸುರೇಖ ! ಎಂದೋ ಕರೆಯುತ್ತಿದ್ದರು . ಅವರಿಗೆ ತಂದೆಯ ವಯಸ್ಸಿನಲ್ಲಿದ್ದವರನ್ನು ಅಪ್ಪಾ ! ಎಂದೋ , ಅಯ್ಯಾ ! ಎಂದೋ , ಸಂಬೋಧಿಸುತ್ತಿದ್ದರು . ವಯಸ್ಸಿನಲ್ಲಿ ಚಿಕ್ಕವರಾದ ಗಂಡು ಹುಡುಗರನ್ನು ಎಲವೋ ! ಅಪ್ಪಿ ! ಎಂದೋ , ಬಂಗಾರಾ ! ಎಂದೋ ಕರೆಯುತ್ತಿದ್ದರು . ಅವರಿಗೆ ತಾತನ ವಯಸ್ಸಿನವರನ್ನು ತಾತಾ ! ಎಂದು ಕರೆಯುತ್ತಿದ್ದರು . ಸ್ತ್ರೀಯರಾದರೆ ಪ್ರೀತಿ ವಿಶ್ವಾಸದಿಂದ ಅಜ್ಜಿ ! ಎಂದು ಕರೆಯುತ್ತಿದ್ದರು .

ಶ್ರೀಪಾದರ ನಿತ್ಯ ಕಾರ್ಯಕ್ರಮಗಳು ಹಾಗು ದರ್ಬಾರು

ಶುಕ್ರವಾರದ ದರ್ಬಾರು ಒಮ್ಮೊಮ್ಮೆ ಕುರುಗಡ್ಡೆಯಲ್ಲಿ ನಡೆಯುತ್ತಿತ್ತು . ಒಮ್ಮೊಮ್ಮೆ ಪಂಚದೇವ ಪಹಾಡ್‌ನಲ್ಲಿ ನಡೆಯುತ್ತಿತ್ತು . ಅದೇ ವಿಧವಾಗಿ ಗುರುವಾರದ ದರ್ಬಾರು ಕುರುಗಡ್ಡೆಯಲ್ಲಿಯೋ ಪಂಚದೇವ ಪಹಾಡ್‌ನಲ್ಲಿಯೋ ನಡೆಯುತ್ತಿತ್ತು . ಇದನ್ನು ಅವರ ಇಷ್ಟದಂತೆ ಮಾಡುತ್ತಿದ್ದರು . ಭಾನುವಾರದ ದಿನ ದರ್ಬಾರು ಮಾಡಿದಾಗ ಅತ್ಯಂತ ಗಹನವಾದ ಯೋಗವಿದ್ಯೆಯನ್ನು ಕುರಿತು ಉಪನ್ಯಾಸ ಮಾಡುತ್ತಿದ್ದರು . ಆಮೇಲೆ ಬಂದವರ ಯೋಗಕ್ಷೇಮಗಳನ್ನು ವಿಚಾರಿಸುತ್ತಿದ್ದರು . ಅವರ ಕಷ್ಟಗಳನ್ನು ಸಮಸ್ಯೆಗಳನ್ನು ಸಹನೆಯಿಂದ ಕೇಳಿ ಅಭಯ ಪ್ರದಾನವನ್ನು ಮಾಡುತ್ತಿದ್ದರು . ಸೋಮವಾರದ ದರ್ಬಾರಿನಲ್ಲಿ ಪುರಾಣ ಕಥೆಗಳ ವಿಚಾರವಾಗಿ ಹೇಳುತ್ತಿದ್ದರು . ಬಂದ ಭಕ್ತರ ಯೋಗಕ್ಷೇಮಗಳನ್ನು ವಿಚಾರಿಸುತ್ತಿದ್ದರು . ಮಂಗಳವಾರದ ದರ್ಬಾರಿನಲ್ಲಿ ಉಪನಿಷತ್ತುಗಳ ವಿಚಾರವಾಗಿ ಬೋಧಿಸುತ್ತಿದ್ದರು . ಆಮೇಲೆ ಭಕ್ತರ ವೈಯ್ಯಕ್ತಿಕ ಸಮಸ್ಯೆಯನ್ನು ಕೇಳಿ ಅವಕ್ಕೆ ಪರಿಹಾರ ಮಾರ್ಗವನ್ನು ಸೂಚಿಸುತ್ತಿದ್ದರು . ಜೊತೆಗೆ ಅಭಯ ಪ್ರದಾನ ಮಾಡುತ್ತಿದ್ದರು . ಬುಧವಾರದ ದರ್ಬಾರಿನಲ್ಲಿ ವೇದಗಳನ್ನೂ ವೇದಾರ್ಥಗಳನ್ನೂ ಕುರಿತು ವಿವರಿಸುತ್ತಿದ್ದರು . ಅನಂತರ ಭಕ್ತರ ವ್ಯಥೆಗಳನ್ನು ತುಂಬಾ ತಾಳ್ಮೆಯಿಂದ ಕೇಳಿ ಅಭಯವನ್ನು ಕೊಡುವರು . ಗುರುವಾರದ ದರ್ಬಾರಿನಲ್ಲಿ ಗುರುತತ್ತ್ವವನ್ನು ಕುರಿತು ವಿವರಿಸುವರು . ಈ ದರ್ಬಾರಿನಲ್ಲೂ ಭಕ್ತರ ಆದಿವ್ಯಾಧಿಗಳನ್ನು ನಿವಾರಿಸಿ ಅಭಯ ಪ್ರದಾನವನ್ನು ಕೊಡುತ್ತಿದ್ದರು . ಆದರೆ ಆ ದಿನ ಪ್ರತ್ಯೇಕವಾಗಿ ಅಡಿಗೆ ಮಾಡಿಸಿ ಎಲ್ಲರಿಗೂ ಭೋಜನವನ್ನು ಇಡುತ್ತಿದ್ದರು . ಅವರಿಗೆ ಒಂದೊಂದು ಸಲ ತಮ್ಮ ಭಕ್ತರ ಮೇಲೆ ಪ್ರೇಮ ಉಕ್ಕಿ ಬಂದರೆ ತಾವೇ ಸ್ವತಃ ಭೋಜನವನ್ನು ಬಡಿಸುತ್ತಿದ್ದರು . ಕೆಲವು ಅದೃಷ್ಟವಂತರಿಗೆ ಖುದ್ದಾಗಿ ಅವರೇ ಅನ್ನವನ್ನು ತಿನ್ನಿಸುತ್ತಿದ್ದರು . ಇನ್ನೂ ಕೆಲವರಿಗೆ ನಾಚಿಕೆ ಸ್ವಭಾವ ಇದ್ದವರಿಗೆ ಅವರ ಬಾಯಲ್ಲಿ ಅನ್ನವನ್ನು ತುರುಕಿ ತಿನ್ನಿಸುತ್ತಿದ್ದರು . ತನ್ನ ಖಜಾನೆಯು ಯಾವಾಗಲೂ ತುಂಬಿಯೇ ಇರುತ್ತದೆಂದೂ ಹಣದ ಕೊರತೆಯಾಗಲಿ , ಅನ್ನದ ಅಭಾವವಾಗಲಿ ಆಗುವ ಪ್ರಸಕ್ತಿಯೇ ಇರುವುದಿಲ್ಲವೆಂದೂ ಹೇಳುತ್ತಿದ್ದರು . ಶುಕ್ರವಾರದ ದರ್ಬಾರಿನಲ್ಲಿ ಶ್ರೀವಿದ್ಯೆಯನ್ನು ಕುರಿತು ಬೋಧಿಸುವರು . ಆ ದಿನ ಕಡ್ಡಾಯವಾಗಿ ಅರಿಶಿನದ ಕೊಂಬುಗಳನ್ನು ಹಂಚುತ್ತಿದ್ದರು . ಶನಿವಾರದ ದರ್ಬಾರಿನಲ್ಲಿ ಶಿವಾರಾಧನೆಯ ಮಹಾತ್ಮೆಯನ್ನು ಕುರಿತು ಬೋಧಿಸುತ್ತಿದ್ದರು .

( ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ : 270

ರೋಗಿ ಸಾಯುವ ಸ್ಥಿತಿಗೆ ಬಂದಿದ್ದರೂ ವೈದ್ಯ
ಭೇದವಿಲ್ಲದೆ ಮತ್ತು ನೀಡಬೇಕು .
ಗುರುದೇವನು ಹಾಗೆ.
ಶಿಷ್ಯನಿಗೆ ಸಮಭಾವ ವಿದ್ಯಾದಾನ ಮಾಡಬೇಕು .
ಎಲ್ಲ ಕುಲ ಮತಗಳಿಗೂ ಸುಖದುಃಖ ಸರಿಸಮ .
ಇದನ್ನು ತಿಳಿಯದ ಗುರುವು ಗುರುವಲ್ಲ , ಗರ್ವಗಿರಿ
– ಸಚ್ಚಿದಾನಂದ ಶ್ರೀ ಸ್ವಾಮೀಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share