MP – ಆಧ್ಯಾತ್ಮಿಕ ಅಂಗಳ : 30 – 07-2021 : ಶ್ರೀಪಾದ ವಲ್ಲಭರ ಚರಿತ್ರೆ : ಪುಟ – 273

339
Share

 

ಶ್ರೀಪಾದ ಶ್ರೀವಲ್ಲಭರ ದಿವ್ಯ ಚರಿತಾಮೃತ –
ಅದ್ಯಾಯ 51
ಪುಟ : 273

|| ಶ್ರೀಪಾದರಾಜಂ ಶರಣಂ ಪ್ರಪದ್ಧೇ ||
॥ ಜಯವಾಗಲಿ ಜಯವಾಗಲಿ ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ॥

ಗುರುನಿಂದೆ ಮಾಡುವುದರಿಂದ ಉಂಟಾಗುವ ದಾರಿದ್ರವೇ ಮೊದಲಾದ ಶಾಪಗಳ ನಿವೃತ್ತಿ

ನಾಮಸ್ಮರಣ ಮಹಿಮೆ

ಶ್ರೀಪಾದವಲ್ಲಭರು ಒಂದು ಸಲ ನನ್ನ ಹತ್ತಿರ , ಶಂಕರಭಟ್ಟ ! ನಮ್ಮ ಅಗ್ನಿ ಯಜ್ಞದ ತರುವಾಯ ಮುಖ್ಯವಾದದ್ದು ವಾಯುಯಜ್ಞ . ನಾನು ವಾಯುಯಜ್ಞವನ್ನು ಕೂಡ ಪ್ರಾರಂಭಿಸಲಿದ್ದೇನೆ ‘ ಎಂದು ಹೇಳಿದರು .
ವಾಯುಯಜ್ಞವೆಂದರೆ ಏನೋ ನನಗೆ ತಿಳಿಯದಾಯಿತು . ಅಷ್ಟರಲ್ಲಿ ಹೊಟ್ಟೆನೋವಿನಿಂದ ನರಳುತ್ತಿದ್ದ ಒಬ್ಬ ವೃದ್ಧ ಬ್ರಾಹ್ಮಣನು ಕುರುಗಡ್ಡೆಗೆ ಬಂದನು . ಆತನು ವಿಪರೀತವಾಗಿ ಬಾಧೆ ಪಡುತ್ತಿದ್ದನು . ಈ ನೋವನ್ನು ಸಹಿಸಿಕೊಳ್ಳುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಮೇಲು ಎಂದು ಆತನು ಹೇಳಿದನು .
ಆಗ ಶ್ರೀಪಾದರು , “ ನೀನು ಪೂರ್ವ ಜನ್ಮದಲ್ಲಿ ಎಷ್ಟೋ ಜನರನ್ನು ನಿನ್ನ ವಾಗ್ದಾಣಗಳಿಂದ ತುಂಬ ಹಿಂಸಿಸಿದ್ದೀಯೆ . ಚುಚ್ಚು ಮಾತುಗಳಿಂದ ಬಹಳ ಬಾಧೆ ಪಡಿಸಿದ್ದೀಯೆ . ಅದರ ಫಲವಾಗಿ ಈಗ ನಿನಗೆ ಈ ದುರದೃಷ್ಟಕರವಾದ ವ್ಯಾಧಿಯು ಪ್ರಾಪ್ತವಾಗಿದೆ . ಮಾನವರ ವಾಗ್ದೋಷಗಳನ್ನು ಕಳೆದುಕೊಳ್ಳುವುದಕ್ಕೆ ಈ ಕಲಿಯುಗದಲ್ಲಿ ಭಗವಂತನ ನಾಮಸ್ಮರಣೆಯನ್ನು ಬಿಟ್ಟರೆ ಬೇರೊಂದಿಲ್ಲ . ಇದರಿಂದ ವಾಯುಮಂಡಲವೆಲ್ಲವೂ ಪರಿಶುದ್ಧವಾಗುತ್ತದೆ . ನಾನು ಕುರುಗಡ್ಡೆಯಲ್ಲಿ ನಾಮಸ್ಮರಣೆ ಎಂಬ ಮಹಾಯಜ್ಞವನ್ನು ಪ್ರಾರಂಭಿಸುವುದರ ಮೂಲಕ ಅದಕ್ಕೆ ಶ್ರೀಕಾರವನ್ನು ಹಾಕುತ್ತಿದ್ದೇನೆ . ಯೋಗ ಸ್ಥಾಯಿಯಲ್ಲಿ ಪರಾ , ಪಶ್ಯಂತಿ , ಮಧ್ಯಮ , ವೈಖರಿ ಎನ್ನುವ ವಾಗ್ರೂಪಗಳನ್ನು ನಿಯಂತ್ರಿಸುವವನಿದ್ದೇನೆ . ಯಾರೇ ಆಗಲಿ ಶ್ರೀಪಾದವಲ್ಲಭ ದಿಗಂಬರ ! ದತ್ತ ದಿಗಂಬರ ! ಎಂದು ಮನಸ್ಪೂರ್ತಿಯಾಗಿ ನಾಮಸ್ಮರಣೆಯನ್ನು ಮಾಡಿದರೆ ಅವರಿಗೆ ನಾನು ಅತ್ಯಂತ ಸುಲಭ ಪ್ರಾಪ್ತನಾಗಿ ಶುಭಫಲಗಳನ್ನು ಉಂಟು ಮಾಡುತ್ತೇನೆ ” ಎಂದರು .
ಶ್ರೀಪಾದರ ಆದೇಶದಂತೆ ಮೂರು ದಿನಗಳು ಹಗಲೂ ರಾತ್ರಿ , ಕುರುಗಡ್ಡೆಯಲ್ಲಿ ಶ್ರೀಪಾದ ಶ್ರೀವಲ್ಲಭ ದಿಗಂಬರ ! ಎಂಬ ನಾಮಸ್ಮರಣೆಯು ಮಾಡಲ್ಪಟ್ಟಿತು . ಆ ಮೂರುದಿನ ಮಾತ್ರವೇ ಶ್ರೀಪಾದರು ರಾತ್ರಿಯ ಹೊತ್ತು ಕುರುಗಡ್ಡೆಯಲ್ಲಿರಲು ಎಲ್ಲರಿಗೂ ಅನುಮತಿ ಕೊಟ್ಟರು . ವೃದ್ಧ ಬ್ರಾಹ್ಮಣನ ಹೊಟ್ಟೆ ನೋವು ನಿವಾರಿಸಲ್ಪಟ್ಟಿತು .
ಶ್ರೀಪಾದರು , “ ವಾಯುಮಂಡಲವೆಲ್ಲವೂ ಈಗ ಎಲ್ಲರೂ ತಪ್ಪು ಮಾತುಗಳನ್ನು ಆಡುತ್ತಿರುವುದರಿಂದ ಅವರ ವಾಗ್ಜಾಲದಿಂದ ತುಂಬಿ ಹೋಗಿದೆ . ಮಾನವನು ಯಾವುದಾದರೂ ಒಂದು ಮಾತನ್ನು ಆಡಿದಾಗ ಪ್ರಕೃತಿಯಲ್ಲಿನ ಸತ್ವ ರಜಸ್ ತಮೋ ಗುಣಗಳಲ್ಲಿ ಒಂದು ಗುಣಗಳನ್ನಾಗಲಿ , ಎರಡು ಗುಣಗಳನ್ನಾಗಲಿ , ಇಲ್ಲವೆ ಮೂರು ಗುಣಗಳನ್ನಾಗಲಿ ಕೆರಳಿಸುತ್ತದೆ . ಆ ಕೆರಳಿಸಿದ ಗುಣಗಳನ್ನು ಸಮತೋಲನಕ್ಕೆ ತರದಿರುವುದರಿಂದ ಪೃಥ್ವಿಯನ್ನೆಲ್ಲಾ ವ್ಯಾಪಿಸಿರುವ ವಾಯುರಾಕಾಶದ ಮೇಲೆ ದುಷ್ಟಭಾವ ಉಂಟಾಗುತ್ತದೆ . ಪಂಚಭೂತಗಳು ದೂಷಿತವಾಗುವುದರಿಂದ ಒಟ್ಟಿಗೆ ಎಲ್ಲವೂ ದೂಷಿತವಾಗಿ ಮನುಷ್ಯನ ಮನಸ್ಸು ಶರೀರ ಅಂತರಾತ್ಮಗಳು ದೂಷಿತವಾಗುತ್ತವೆ . ಆ ಕಾರಣದಿಂದ ಪಾಪಕರ್ಮಗಳನ್ನು ಮಾಡುತ್ತಾನೆ . ಅದರಿಂದ ದರಿದ್ರನಾಗುತ್ತಾನೆ . ದಾರಿದ್ರದಿಂದ ಮತ್ತೆ ಪಾಪ ಕರ್ಮಗಳನ್ನು ಮಾಡುತ್ತಾನೆ . ಪಾಪಕರ್ಮಗಳಿಂದ ಮನಸ್ಸು ಕಲುಷಿತವಾಗಿ ದಾನಾದಿ ಪುಣ್ಯ ಕರ್ಮಗಳನ್ನು ಮಾಡದೆ ಹೋಗುತ್ತಾನೆ . ಅವನು ಇನ್ನೂ ದರಿದ್ರನಾಗುತ್ತಾನೆ .
( ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ : 274

ಪ್ರವಾಹದಲ್ಲೆರೆಡು ಕಡ್ಡಿಗಳು ಒಂದಾಗಿ
ತೇಲುತ್ತ ಸಾಗುವವು ದೂರ ಪಯಣ.
ಹುಚ್ಚು ಹೊಳೆ ದಡಮೀರಿ ಹರಿವ ಹೊನಲಾದಾಗ
ಎರೆಡು ಕಡ್ಡಿಗಳು ಬೇರೆ ಬೇರೆ .
ಗಂಡ ಹೆಂಡಿರ ಬಾಳುಕೂಡ ಅಂತೆಯೇ ದೇವ.
ಯಾರಿಗೆ ಯಾರೂ ಇಲ್ಲ
– ಸಚ್ಚಿದಾನಂದ ಶ್ರೀ ಸ್ವಾಮೀಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share