ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ – 62

246
Share

ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ – 62
ಓಂ ನಮೋ ಹನುಮತೇ ನಮಃ

ಮಂಡೋದರಿ

485) ಹಾಗೆ ನೋಡುತ್ತಿದ್ದಾಗ, ರಾವಣಾಸುರನ ಮಂಚದ ಪಕ್ಕದಲ್ಲಿ, ಅದಕ್ಕಿಂತ ಚಿಕ್ಕ ಮಂಚವೊಂದರ ಮೇಲೆ ಮಧ್ಯವಯಸ್ಸಿನ ಹೆಂಗಸೊಬ್ಬಳು ಮಲಗಿ ನಿದ್ರಿಸುತ್ತಿರುವುದು ಕಾಣಿಸಿತು. ಅವಳು ನೋಡಲು ಸತ್ವಗುಣವೇ ಮೂರ್ತೀಭವಿಸಿದಂತೆ ಇದ್ದಳು.
486) ಆ ಮುಖಲಕ್ಷಣ, ಆ ಸಾತ್ವಿಕತೆಯನ್ನು ನೋಡಿದ ಹನುಮಂತನಿಗೆ ಇವಳೇ ಸೀತೆ ಅನ್ನಿಸಿತು. ಆನಂದ ಉಕ್ಕಿ, ಕುಣಿದಾಡಿದ. ತನಗೆ ತಾನೇ ಮುತ್ತುಕೊಟ್ಟುಕೊಂಡ. ಅತ್ತಿಂದಿತ್ತ ಜಿಗಿದಾಡಿದ.
487) ಆದರೆ, ಕೆಲ ಕ್ಷಣಗಳೊಳಗೇ ಅವನಿಗೆ ಇನ್ನೊಂದು ಯೋಚನೆ ಬಂತು. “ಇಷ್ಟು ಸಾತ್ವಿಕವಾಗಿ ಇರುವ ಈ ವ್ಯಕ್ತಿ ಸೀತಾದೇವಿ ಆದರೆ, ಈ ಸ್ಥಿತಿಯಲ್ಲಿ ಇಲ್ಲಿ ಆನಂದವಾಗಿ ಇರುತ್ತಿದ್ದಳೇ?” ಈ ಆಲೋಚನೆ ಬರುತ್ತಲೇ ಹನುಮಂತನು ಅವಳನ್ನು ಮತ್ತೊಮ್ಮೆ
ಪರಿಶೀಲಿಸಿ ನೋಡಿ, ಇವಳು ಸೀತೆ ಅಲ್ಲವೆಂದೂ, ಮಹಾ ಪತಿವ್ರತೆ ಎಂದು ಪ್ರಸಿದ್ಧಳಾದ, ರಾವಣನ ಪಟ್ಟದರಾಣಿಯಾದ ಮಂಡೋದರಿ (ಮಂಡೋದರಿ) ಎಂದೂ ನಿಶ್ಚಯಿಸಿಕೊಂಡ. ಅವಳಲ್ಲಿ ಇದ್ದ ಉತ್ತಮ ಸಾಮುದ್ರಿಕಾಲಕ್ಷಣಗಳನ್ನು ಗಮನಿಸಿ, ಮನದಲ್ಲೇ
ಅವಳಿಗೆ ನಮಸ್ಕರಿಸಿದನು.
488) ರಾವಣಾಸುರನನ್ನೂ ಹನುಮಂತ ಪರಿಶೀಲನಾತ್ಮಕವಾಗಿ ನೋಡಿದ. “ಇವನು ಇಲ್ಲಿಯವರೆಗೆ ಎಷ್ಟು ಪಾಪಗಳನ್ನು ಮಾಡಿದ್ದರೂ ಇವನ ಪುಣ್ಯರಾಶಿ ಕಡಿಮೆಯಾಗಿರಲಿಲ್ಲ. ಏಕೆಂದರೆ ಇವನು ಪರಸ್ತ್ರೀಯನ್ನು ಅಪಹರಿಸಿರಲಿಲ್ಲ. ಈಗ
ಆ ದುಷ್ಕರ್ಮವನ್ನೂ ಮಾಡಿದ್ದಾನೆ. ಅದರಲ್ಲೂ ಜಗದ್ವಂದ್ಯನಾದ ಶ್ರೀರಾಮಚಂದ್ರನ ಧರ್ಮಪತ್ನಿಯೂ ಮಹಾಸಾಧ್ವಿಯೂ ಆದ ಸೀತಾದೇವಿಯನ್ನು ಅಪಹರಿಸಿದ್ದಾನೆ.
ಈ ಕೃತ್ಯ ನಡೆದಿಲ್ಲದೇ ಹೋಗಿದ್ದರೆ, ಇವನ ದಿವ್ಯ ತೇಜಸ್ಸಿಗೆ ಎದುರಾಗಬಲ್ಲ ವೀರ ಮೂರು ಲೋಕಗಳಲ್ಲೂ ಇರುತ್ತಿರಲಿಲ್ಲ” ಎಂದು ಯೋಚಿಸಿದ.
489) ತನ್ನ ಉಳಿದ ಆಲೋಚನೆಗೆ ಕಡಿವಾಣ ಹಾಕಿ ಪುನಃ ಇನ್ನೊಂದು ಬಾರಿ ಆ ಅಂತಃಪುರವನ್ನೆಲ್ಲಾ ಶೋಧಿಸಿದ. ಹೇಳಲು ಸಾಧ್ಯವಿಲ್ಲದ ಭಂಗಿಗಳಲ್ಲಿ ಇರುವ ಹೆಂಗಸರನ್ನು ಪುನಃ ಪುನಃ ನೋಡಬೇಕಾಗಿಬರುತ್ತದೆ ಎಂದು ಬಾಧೆ ಪಟ್ಟು, ತನ್ನ ಹೃದಯದಲ್ಲಿ
ಏನಾದರೂ ವಿಕಾರವಾದ ಚಲನೆ ಉಂಟಾಗುತ್ತಿದೆಯೇ ಎಂದು ಒಂದು ಸಾರಿ ಪರಿಶೀಲಿಸಿಕೊಂಡ. ಅಂತಹುದೇನೂ ಆಗುತ್ತಿಲ್ಲ ಎಂದು ತನಗೆ ತಾನೇ ಖಚಿತಪಡಿಸಿಕೊಂಡ. ತಾನು ಹುಡುಕುತ್ತಿರುವುದು ಒಬ್ಬ ಸ್ತ್ರೀಯನ್ನೇ ಆಗಿರುವುದರಿಂದ ಸ್ತ್ರೀಯರ ನಡುವೆ
ತಿರುಗಾಡದೇ ವಿಧಿಯೇ ಇಲ್ಲವೆಂದು ಸ್ವಲ್ಪ ತನ್ನನ್ನು ತಾನೇ ಸಮಾಧಾನ ಪಡಿಸಿಕೊಂಡ.
490) ರಾವಣನ ಅಂತಃಪುರವನ್ನೂ ಜಾಲಿಸಿದ್ದಾಯಿತು. ಆದರೂ ಸೀತಾದೇವಿ ಕಾಣಿಸಲಿಲ್ಲವಲ್ಲಾ ಎಂದು ಹನುಮಂತನಿಗೆ ದಿಗಿಲಾಯಿತು. ಹಿಂದಿರುಗಿ ಹೋಗಿ ವಾನರ ವೀರರಿಗೆ ಏನೆಂದು ಉತ್ತರ ಹೇಳುವುದು? ಸುಗ್ರೀವನು ಕೊಟ್ಟ ಗಡುವು ಎಂದೋ
ಮುಗಿದುಹೋಗಿದೆ. ಆದ್ದರಿಂದ ತನ್ನಿಂದಾಗಿ ತನ್ನ ಗುಂಪಿನವರಿಗೆ ಸಾವು ತಪ್ಪಿದ್ದಲ್ಲ ಎಂದು ಮಿಲಮಿಲನೆ ಒದ್ದಾಡಿದ. ಇಲ್ಲೇ ಎಲ್ಲಾದರೂ ಪ್ರಾಯೋಪವೇಶವಾಡಿ ಸಾಯುವುದೇ ಮೇಲು ಎಂದುಕೊಂಡ.
491) ಹೀಗೆ ಸ್ವಲ್ಪಹೊತ್ತು ಮನಸ್ಸು ವ್ಯಾಕುಲಗೊಂಡಿತ್ತು. ಆದರೆ ಹನುಮಂತನು ತಾನೇ ಸಂಭಾಲಿಸಿಕೊಂಡು, “ಛೀ ಇದೇನು ಈ ಆಲೋಚನೆಗಳು! ಜೀವಿಯು ಬದುಕಿರುವವರೆಗೂ ಉತ್ಸಾಹದಿಂದಲೇ ಇರಬೇಕು. ಉತ್ಸಾಹದಿಂದ ತನ್ನ ಪಾಲಿನ ಕರ್ತವ್ಯವನ್ನು
ತಾನು ಮಾಡಬೇಕು. ಫಲದ ಬಗ್ಗೆ ಯೋಚಿಸಬಾರದು. ಇದೇ ಉತ್ತಮ ಧರ್ಮ” ಎಂದು ತನ್ನನ್ನು ತಾನೇ ಪ್ರೋತ್ಸಾಹ ಪಡಿಸಿಕೊಂಡು, ಈಗ ಎತ್ತ ಹೋಗಲಿ ಎಂದು ಯೋಚಿಸಲಾರಂಭಿಸಿದ.
492) ಸೀತಾದೇವಿ ರಾವಣನ ಮನೆಯಲ್ಲೇ ಇದ್ದಾಳೆ ಎಂದು ಸಂಪಾತಿ ಹೇಳಿದ್ದ. ಆದ್ದರಿಂದ ಇನ್ನೊಂದುಸಾರಿ ರಾವಣನ ಮನೆಯನ್ನೆಲ್ಲಾ ಹುಡುಕಿಬಿಡೋಣ ಎಂದುಕೊಂಡು, ಈಸಾರಿ ಇನ್ನೂ ಧೈರ್ಯಮಾಡಿ, ನೆಲ ಮಾಳಿಗೆಯ ಬಾಗಿಲನ್ನೂ ತೆಗೆದು ರಾವಣನ
ಅಂತಃಪುರವನ್ನೆಲ್ಲಾ ಇನ್ನೊಮ್ಮೆ ಹುಡುಕಾಡಿದ. ಸೀತಾದೇವಿ ಕಾಣಿಸಲಿಲ್ಲ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share