ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 79

182
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 79
ಓಂ ನಮೋ ಹನುಮತೇ ನಮಃ

ಸೀತಾದೇವಿಯ ಉತ್ತರ
548) ಹನುಮಂತನ ಮಾತುಗಳನ್ನು ಕೇಳುತ್ತಿದ್ದಂತೆ ಸೀತಾದೇವಿ ಮುಖದಲ್ಲಿ ಆನಂದ ಕ್ರಮೇಣ ಹೆಚ್ಚುತ್ತಿತ್ತು. ಈ ಸ್ಥಿತಿಗೆ ಬಂದಾಗ ಅವಳು ಅಪ್ರಯತ್ನವಾಗೇ ಹನುಮಂತನಿಗೆ ಉತ್ತರ ಕೊಡಲಾರಂಭಿಸಿದಳು. ಅವಳು ತನ್ನೆದುರಿಗಿದ್ದ ವ್ಯಕ್ತಿಯನ್ನು ಯಾವ ರೀತಿಯಲ್ಲೂ ಸಂಬೋಧಿಸದೇ ಗಾಳಿಯೊಡನೆ ಮಾತಾಡುವಂತೆ ಮಾತಾಡಿದಳು.
1. ದಶರಥ ಮಹಾರಾಜನ ಸೊಸೆ, ಜನಕ ಮಹಾರಾಜನ ಮಗಳು ನಾನು. ನನ್ನ ಹೆಸರು ಸೀತೆ. ನಾನು ರಾಮ ಪ್ರಭುವಿನ ಹೆಂಡತಿ.
2. ನಾನು ಮದುವೆಯಾದ ಮೇಲೆ ಹನ್ನೆರಡು ವರ್ಷ ಅತ್ತೆಮನೆಯಲ್ಲಿ ಸುಖವಾಗಿದ್ದೆ.
3. 13 ನೇ ವರ್ಷ ಮಹಾರಾಜ ದಶರಥನು ರಾಮಪ್ರಭುವಿಗೆ ಪಟ್ಟಾಭಿಷೇಕ ಮಾಡಬೇಕೆಂದು ನಿರ್ಧರಿಸಿದ.
4. ಆದರೆ ಅವನ ಮೂರನೇ ಹೆಂಡತಿಯಾದ ಕೈಕೇಯಿ ಗೋಳಾಡಿದ್ದರಿಂದ, ಅವನು ಹಿರಿಮಗ ರಾಮನಿಗೆ ರಾಜ್ಯಾಧಿಕಾರವನ್ನು ತ್ಯಾಗಮಾಡುವಂತೆ ಬೇಡಿಕೊಂಡ.
5. ನನ್ನ ಪ್ರಭುವು ತಂದೆಯ ಆಜ್ಞೆಯನ್ನು ಸಂತೋಷವಾಗಿ ಅಂಗೀಕರಿಸಿ, ನಾರುಮಡಿ ಉಟ್ಟು ಕಾಡಿಗೆ ಹೊರಟ.
6. ನನ್ನನ್ನು, ಹೆತ್ತ ತಾಯಿಯಾದ ಕೌಸಲ್ಯೆಯ ಬಳಿ ಇರಿಸಬೇಕೆಂದು ಅವನು ತೀರ್ಮಾನಿಸಿದ. ಆದರೆ ನಾನೇ ಹಟಹಿಡಿದು ಪತಿವ್ರತಾ ಧರ್ಮವನ್ನು ಅನುಸರಿಸಿ, ಅವನ ಕಣ್ಮುಂದೆಯೇ ನಾರುಮಡಿ ಉಟ್ಟು ಕಾಡಿಗೆ ಹೊರಟೆ. ನನ್ನ ಪ್ರಭುವಿನ ತಮ್ಮನಾದ ಲಕ್ಷ್ಮಣನೂ ನಾರುಮಡಿಯುಟ್ಟು ನಮ್ಮೊಡನೆ ಬಂದ.
7. ನಾವು ಮೂವರೂ ಕಂಡಿರದ, ಕೇಳಿರದ, ಗೊತ್ತಿರದ ಕಾರಡವಿಯಲ್ಲಿ ತಿರುಗಾಡುತ್ತಾ ಇರುವಾಗ ದುರಾತ್ಮನಾದ ರಾವಣಾಸುರ ನನ್ನನ್ನು ಅಪಹರಿಸಿ ಇಲ್ಲಿಗೆ ಕರೆತಂದ.
8. ಆ ಕ್ರೂರಾತ್ಮನು ನನಗೆ ಭಿಕ್ಷೆಯಾಗಿ ಕೊಟ್ಟಿರುವ ಗಡುವಿನಲ್ಲಿ ಉಳಿದಿರುವುದು ಇನ್ನೆರಡೇ ತಿಂಗಳು. ಆ ಮೇಲೆ ನಾನು ಬದುಕಿರುವುದಿಲ್ಲ. ಇಷ್ಟು ಹೇಳುವಷ್ಟರಲ್ಲಿ ಸೀತಾದೇವಿಗೆ ದುಃಖ ಉಕ್ಕಿ ಬಂತು. ಬಳಬಳನೆ ಅತ್ತುಬಿಟ್ಟಳು.
549) ಕೂಡಲೇ ಅವಳಿಗೆ ಸಮಾಧಾನ ಹೇಳಬೇಕೆನಿಸಿತು ಹನುಮಂತನಿಗೆ. ಈ ಬಾರಿ ಸಂಬೋಧನೆಯನ್ನು ಬದಲಾಯಿಸಿ, ರಾಜ ಪತ್ನಿಯರನ್ನು ಸಂಬೋಧಿಸುವಂತೆ ದೇವಿ! ಎಂದು ಸಂಬೋಧಿಸಿದ.
1. ದೇವಿ! ನಾನು ರಾಮದೂತ. ರಾಮನ ಆಜ್ಞೆಯ ಮೇರೆಗೇ ಇಲ್ಲಿಗೆ ಬಂದಿರುವುದು.
2. ರಾಮಪ್ರಭು ಕ್ಷೇಮವಾಗಿದ್ದಾನೆ.
3. ಅವನು ಬ್ರಹ್ಮಾಸ್ತ್ರ ಸಂಪನ್ನನು. ವೇದವೇತ್ತನು. ದಶರಥನ ಮಗ. ಅವನು ನಿನಗೆ ತನ್ನ ಕ್ಷೇಮದ ಬಗ್ಗೆ ತಿಳಿಸಲು ಹೇಳಿದ್ದಾನೆ.
4. ನಿನ್ನ ಗಂಡನ ತಮ್ಮನಾದ ಲಕ್ಷ್ಮಣನು ಶೋಕದಿಂದ ತಪಿಸುತ್ತಾ, ನಿನಗೆ ವಂದನೆಗಳನ್ನು ತಿಳಿಸಲು ಹೇಳಿದ್ದಾನೆ.
550) ಈ ಮಾತುಗಳನ್ನು ಕೇಳಿ ಸೀತೆಗೆ ನಂಬಿಕೆಯೂ ಸಂತೋಷವೂ ಏಕಕಾಲದಲ್ಲಿ ಉಂಟಾದವು. ಅದು ಅವಳ ಮುಖದಲ್ಲಿ ವ್ಯಕ್ತವಾಯಿತು. ಅವಳ ಮಾತಿನ ಧಾಟಿಯೂ ಸ್ವಲ್ಪ ಪ್ರಸನ್ನವಾದಂತಿತ್ತು. ವಿವರವಾಗಿ ಹೇಳುವಂತೆ ಕೇಳಿದಳು.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share