ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 83

197
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ – 83

ಓಂ ನಮೋ ಹನುಮತೇ ನಮಃ

582) ನಡೆದ ವಿಷಯ ಸೀತೆಗೆ ತಿಳಿಯಿತು.
ಶ್ಲೋಕ೤೤
ಯದಿ ಮಾಂ ವೃತ್ತ ಸಂಪನ್ನಾಂ
ತತ್ಸಮಾಗಮ ಲಾಲಸಾಂ೤
ಸ ವಿಜಾನಾತಿ ಧರ್ಮಾತ್ಮಾ ಶೀತೋ ಭವ
ಹನೂಮತಃ೤೤
ನಾನು ಒಳ್ಳೆಯ ಶೀಲದಿಂದ ಇದ್ದೇನೆಂದು, ಅವನನ್ನು ಸೇರಲು ಹಾತೊರೆಯುತ್ತಿದ್ದೇನೆಂದು, ಧರ್ಮಾತ್ಮನಾದ ನನ್ನ ಪತಿಯು ಭಾವಿಸುತ್ತಿದ್ದರೆ, ಓ ಅಗ್ನಿ ದೇವ! ನೀನು ಹನುಮಂತನ ವಿಷಯದಲ್ಲಿ ತಣ್ಣಗೆ ಇದ್ದುಬಿಡು” – ಎಂದು ಪ್ರಾರ್ಥಿಸಿದಳು.
583) ಅತ್ತ, ಹನುಮಂತನು ಅಗ್ನಿ ತನ್ನನ್ನು ಸುಡುತ್ತಿಲ್ಲವಲ್ಲಾ! ಎಂದು ಆಶ್ಚರ್ಯಪಡುತ್ತಿದ್ದ.
584) ಲಂಕಾದಹನದ ನಂತರ ಹನುಮಂತನು ಸಮುದ್ರದ ಹತ್ತಿರ ಹೋಗಿ, ಉರಿಯುತ್ತಿದ್ದ ಬಾಲವನ್ನು ನೀರಿನಲ್ಲಿ ಅದ್ದಿ ಆರಿಸಿಕೊಂಡನು.
585) ಈ ಗಲಾಟೆಯಲ್ಲಿ ಸೀತೆಯೂ ಸುಟ್ಟು ಹೋದಳೇ! ಎಂದು ಅನುಮಾನ ಬಂದು ಗಾಬರಿಯಾಯಿತು.
586) ಪುನಃ ಮತ್ತೊಂದು ಸಾರಿ ಸೀತೆಯ ಬಳಿ ಹೋಗಿ, ಅವಳಿಗೆ ನಮಸ್ಕಾರ ಮಾಡಿ, ಸಮುದ್ರವನ್ನು ದಾಟಿ ತನ್ನವರ ಬಳಿ ಬಂದು ಸೇರಿದ. ನಡೆದದ್ದನ್ನೆಲ್ಲಾ ವಿವರವಾಗಿ ಹೇಳಿದ.
ಮಧುವನ
587) ವಾನರರು ಕಿಷ್ಕಿಂಧೆಯತ್ತ, ಪ್ರಯಾಣ ಬೆಳೆಸಿದರು. ದಾರಿಯಲ್ಲಿ ಮಧುವನ ಎಂಬ ತೋಟ ಸಿಕ್ಕಿತು. ಅದು ಸುಗ್ರೀವನಿಗೆ ಸೇರಿದ್ದು. ಸುಗ್ರೀವನ ಸೋದರಮಾವ ದಧಿಮುಖನೆಂಬುವನು ಅದನ್ನು ಕಾವಲು ಕಾಯುತ್ತಾ ಇದ್ದ.
588) ಆ ತೋಟದ ಬಳಿ ಬಂದಾಗ ಹನುಮಂತನು ವಾನರರೆಲ್ಲರನೂ ಕರೆದು ಒಳಗೆ ಹೋಗಿ, ಜೇನು ಕುಡಿಯುವಂತೆ ಹೇಳಿದನು. ಅಂಗದನೂ ಸಹ ‘ನಾನು ಅನುಮತಿ ಕೊಡುತ್ತಿದ್ದೇನೆ, ಕುಡಿಯಿರಿ’ ಎಂದ.
589) ಆಗ ವಾನರರೆಲ್ಲರೂ ಇಷ್ಟಬಂದಂತೆ ಜೇನು ಕುಡಿದು ತೋಟವನ್ನು ಧ್ವಂಸ ಮಾಡಿದರು.
590) ಈ ಗಲಾಟೆ ನೋಡಿ ದಧಿಮುಖನು ಬಂದು ಒಂದು ಮರವನ್ನು ಕಿತ್ತುಕೊಂಡು ಅವರನ್ನು ಬೆದರಿಸಲಾರಂಭಿಸಿದ.
591) ಅಂಗದನು ಕುಡಿದ ಮತ್ತಿನಲ್ಲಿ ಎದುರಿಗಿರುವುದು ತನ್ನ ತಾತ ಎಂಬುದನ್ನೂ ಮರೆತು ಅವನನ್ನು ಥಳಿಸಲಾರಂಭಿಸಿದ.
592) ದಧಿಮುಖನು ಅವರ ಕೈಯಿಂದ ಹೇಗೋ ತಪ್ಪಿಸಿಕೊಂಡು ಸುಗ್ರೀವನ ಹತ್ತಿರ ಓಡಿಹೋಗಿ ತನ್ನ ಗೋಳನ್ನು ಹೇಳಿಕೊಂಡ.
ರಾಮಾಲಿಂಗನ ಪ್ರಾಪ್ತಿ
593) ಆಗ ಸುಗ್ರೀವನಿಗೆ ಹನುಮದಾದಿಗಳು ಕೆಲಸವನ್ನು ಯಶಸ್ವಿಯಾಗಿ ಪೂರೈಸಿಕೊಂಡು ಬಂದಿದ್ದಾರೆಂದು ಅರ್ಥವಾಯಿತು. ದಧಿಮುಖನನ್ನು ಸಂತೈಸಿ, ಅವನ ಮೂಲಕವೇ ಅಂಗದಾದಿಗಳಿಗೆ ಬೇಗ ಬರುವಂತೆ ಹೇಳಿಕಳಿಸಿದ.
594) ಹನುಮಂತನೇ ಮೊದಲಾಗಿ ಎಲ್ಲರೂ ಕಿಷ್ಕಿಂಧೆಗೆ ಬೇಗ ಬಂದು ಸೇರಿದರು. ಹನುಮಂತನು ರಾಮನಿಗೆ “ನೋಡಿದೆ ಸೀತೆಯನ್ನು” ಎಂದು ಹೇಳಿದ.
595) (1) ಏವಂ ಮಾಯಾ ಮಹಾಭಾಗಾ ದೃಷ್ಟಾ ಜನಕ ನಂದಿನೀ
ಉಗ್ರೇಣ ತಪಸಾಯುಕ್ತಾ ತ್ವದ್ ಭಕ್ತ್ಯಾ ಪುರುಷರ್ಷಭ
ಮಹಾನುಭಾವಳಾದ ಆ ಸೀತೆಯನ್ನು ನೋಡಿದೆ. ಅವಳು ನಿನ್ನ ಮೇಲೆ ಭಕ್ತಿಯಿಂದ ಉಗ್ರವಾದ ತಪಸ್ಸು ಮಾಡುತ್ತಿದ್ದಾಳೆ – ಎಂದೂ ಹೇಳಿದ. ಅವಳು ಕೊಟ್ಟಿದ್ದ ಚೂಡಾಮಣಿಯನ್ನು ಸಮರ್ಪಿಸಿದ.
(2) ರಾಮನು ಹನುಮಂತನನ್ನು ತುಂಬಾ ಮೆಚ್ಚಿಕೊಂಡ. ಅವನಿಗೆ ನಾನು ಏನು ಕೊಡಬಲ್ಲೆ ಎಂದು ಯೋಚಿಸಿ.
596)
ಏಷ ಸರ್ವಸ್ಯ ಭೂತೋ ಮೇ
ಪರಿಷ್ವಂಗೋ ಹನೂಮತಃ.
ಮಯಾ ಕಾಲಮಿಮಂ ಪ್ರಾಪ್ಯ
ದತ್ತಸ್ತಸ್ಯ ಮಹಾತ್ಮನಃ೤೤
ಪ್ರತ್ಯುಪಕಾರಕ್ಕೆ ಯೋಗ್ಯವಾದ
ಈ ಸಮಯದಲ್ಲಿ ಮಹಾತ್ಮನಾದ
ಈ ಹನುಮಂತನಿಗೆ, ಇದೋ ಈ ನನ್ನ ಆಲಿಂಗನವೇ ಸರ್ವಸ್ವದಾನವಿದ್ದಂತೆ – ಎನ್ನುತ್ತಾ ಶ್ರೀರಾಮನು ಆಂಜನೇಯನನ್ನು ಬಿಗಿದಪ್ಪಿಕೊಂಡನು.
( ಮುಂದುವರೆಯುವುದು )

ರಚನೆ : ಪೂಜ್ಯ ಶ್ರೀ  ಶ್ರೀ  ಗಣಪತಿ ಸಚ್ಚಿದಾನಂದ  ಸ್ವಾಮೀಜಿ 

* ಸಂಗ್ರಹ

ಭಾಲರಾ ಬೆಂಗಳೂರು


Share