ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 55

159
Share

ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 55
ಓಂ ನಮೋ ಹನುನತೇ ನಮಃ

437) ಏನು ಮಾಡುವುದು? ಎಂದು ಯೋಚಿಸುತ್ತಿರುವಾಗ ಅವನಿಗೆ, ಒಂದು ವಿಚಿತ್ರವಾದ ಬೆಟ್ಟ ಕಾಣಿಸಿತು. ಅದರ ಸುತ್ತಳತೆ ಕಡಿಮೆ, ಆದರೆ ಎತ್ತರ ಜಾಸ್ತಿ.
ಈ ಕಡಿದಾದ ಬೆಟ್ಟವನ್ನು ಹತ್ತುವುದು ಸಾಮಾನ್ಯರಿಗೆ ಅಸಾಧ್ಯ. ಆದರೆ ಹನುಮಂತನು ಲೀಲಾಜಾಲವಾಗಿ ಅದನ್ನು ಏರಿಬಿಟ್ಟ. ಮೇಲೆ ನಿಂತು ನೋಡಿದಾಗ ಲಂಕಾನಗರದ ಸಂಪೂರ್ಣ ದೃಶ್ಯ ಕಾಣಿಸಿತು.
438) ಹನುಮಂತನಂತಹ ಅನುಭವಿಗೇ ತಲೆ ತಿರುಗಿದಂತೆ ಆಯಿತು. ಆ ನಗರ, ಅದರ ನಿರ್ಮಾಣದ ಪ್ಲಾನು, ಆ ಬಹು ಮಹಡಿ ಕಟ್ಟಡಗಳು, ಆ ರಕ್ಷಣೆಯ ವ್ಯವಸ್ಥೆ, ಆ ವೈಭವ, ಆ ಸೌಂದರ್ಯ – ಇವುಗಳನ್ನೂ ನೋಡಿದ ಹನುಮಂತ ಬಹಳ ಹೊತ್ತು
ಆಶ್ಚರ್ಯಪಡುತ್ತಾ ನಿಂತುಬಿಟ್ಟ.
439) ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡೇ ನಗರ ನಿರ್ಮಾಣ ಆಗಿದ್ದಂತೆ ಅವನಿಗೆ ಅನಿಸಿತು. ಏಳೆಂಟು ಅಂತಸ್ತುಗಳ ಕಟ್ಟಡಗಳು ಹೆಚ್ಚುಕಡಿಮೆ ಪ್ರತಿಯೊಂದು ಬೀದಿಯಲ್ಲೂ ಇತ್ತು. ಅವನಿಗೆ ಕಾಣಿಸುತ್ತಿದ್ದ ಊರಿನ ಕೊನೆಯ ಮನೆಗೂ ಸಹ ಬಾಗಿಲಿಗೆ ಚಿನ್ನದ
ಕುಶಲ ಕಲೆಯನ್ನು ಮಾಡಲಾಗಿತ್ತು.
440) ಅದೇನೂ ಚಿಕ್ಕ ಊರಲ್ಲ. ಮಹಾನಗರಗಳನ್ನೂ ಮೀರಿಸಿದ ನಗರದಂತಿತ್ತು. ಇಡೀ ದ್ವೀಪವೆಲ್ಲಾ ನಗರವೇ ಆಗಿತ್ತು. ಅದರ ಸುತ್ತಲೂ ಸಹಜವಾದ ಕಂದಕದ ರೂಪದಲ್ಲಿ ಸಮುದ್ರವಿತ್ತು. ಇದಲ್ಲದೇ ಪುರಪ್ರಾಕಾರದ ಸುತ್ತಲೂ ಬೃಹದಾಕಾರದ ಕಂದಕ ಇತ್ತು.
ಅದರ ಪರಿಪಾಲನೆ (ಮೇಂಟೆನೆನ್ಸ್) ಲೋಕೋತ್ತರವಾಗಿತ್ತು. ಅದರ ತುಂಬ ಸುಂದರವಾದ ಮಲ್ಲಿಗೆ ಬಳ್ಳಿಗಳನ್ನು ಕ್ರಮಬದ್ಧವಾಗಿ ಬೆಳೆಸಿದ್ದರು. ಆಗಿಂದಾಗ್ಗೆ ಹೊಸನೀರನ್ನು ಒದಗಿಸುತ್ತಿದ್ದರೆಂದು ಅರ್ಥವಾಗುತ್ತಿತ್ತು.
441) ನಗರ ಮಧ್ಯದಲ್ಲಿ ಅನೇಕ ಕಡೆ ಬಿಗಿಯಾದ ರಕ್ಷಣಾ ವ್ಯವಸ್ಥೆ ಕಾಣಿಸುತ್ತಿತ್ತು. ಅದರಲ್ಲಿ ಏನೂ ಆಶ್ಚರ್ಯವಿಲ್ಲದಿದ್ದರೂ, ಯುದ್ಧಭಯವಿಲ್ಲದ ಈ ಸಮಯದಲ್ಲೂ ಪ್ರಾಕಾರದ ಮೇಲೂ, ಒಳಗೂ ಕಾವಲಿನ ಪಡೆಗಳು ಸರ್ವಸನ್ನದ್ಧರಾಗಿ ಕಾಣುತ್ತಿದ್ದವು. ಆ
ಸೈನಿಕರ ಮುಖದಲ್ಲಿ ತೇಜಸ್ಸಿದೆ. ಅವರ ನಡಿಗೆಯಲ್ಲಿ ಅವರ ಬಲವನ್ನು ವ್ಯಕ್ತ ಪಡಿಸುವ ಠೀವಿ ಇದೆ.
442) ಎಲ್ಲಕ್ಕಿಂತ ಆಶ್ಚರ್ಯವೆಂದರೆ, ಕೋಟೆಯ ಗೋಡೆಯ ಮೇಲಿನ ಪ್ರತಿಯೊಂದು ಬುರುಜಿನ ಮೇಲೂ ಧನುರ್ಧಾರಿ ವೀರರು ಕಾವಲು ಕಾಯುತ್ತಿದ್ದರು. “ಸಾಮಾನ್ಯವಾಗಿ ಯಾವ ರಾಜನೂ ಕೋಟೆ ಗೋಡೆಯ ಮೇಲೆ ಧನುರ್ಧಾರಿಗಳನ್ನು ಕಾವಲಾಗಿ
ಹಾಕುವುದಿಲ್ಲ. ಈ ರಾವಣ ಏಕೆ ಹಾಗೆ ಮಾಡಿದ್ದಾನಪ್ಪಾ!” ಎಂದು ಒಂದು ಕ್ಷಣ ಯೋಚಿಸಿದ. ಅವನಿಗೆ ಕೂಡಲೇ ಹೊಳೆಯಿತು.
443) ರಾಮಲಕ್ಷ್ಮಣರಿಬ್ಬರೂ ಧನುರ್ಧಾರಿಗಳು. ಬರೀ ಧನುರ್ಧಾರಿಗಳಷ್ಟೇ ಅಲ್ಲ. ಅವರಲ್ಲಿ ರಾಮ ಒಬ್ಬನೇ 14 ಸಾವಿರ ರಾಕ್ಷಸರನ್ನು ಅನಾಯಾಸನಾಗಿ ಸಂಹರಿಸಿದ್ದ ಧನುರ್ಧಾರಿ. ಉರಿಯುವ ಕೊಳ್ಳಿಯಿಂದ ತಲೆ ಕೆರೆದುಕೊಳ್ಳುವಂತಹ ಕೆಲಸ ಮಾಡಿದ್ದ ಆ
ರಾವಣ. ಅವರನ್ನು ಎದುರಾಗಿ ಎದುರಿಸುವ ದಮ್ಮಿಲ್ಲದೇ ಮರೆಯಾಗಿ ಹಾಳು ಕೆಲಸ ಮಾಡಿದ್ದ. ಹೀಗಾಗಿ ಅವರಿಂದ ಯಾವ ಕ್ಷಣದಲ್ಲಿ ಯಾವ ರೀತಿಯ ಅಪಾಯ ಉಂಟಾಗುವುದೋ ಏನೋ! ಎಂದು ಅನುಕ್ಷಣವೂ ಭಯಪಡುತ್ತಿದ್ದ. ತನ್ನ ಶತ್ರುಗಳು
ಧನರ್ಧಾರಿಗಳಾದ್ದರಿಂದ ನಗರಪ್ರಾಕಾರದಿಂದ ಮೊದಲುಗೊಂಡು ಎಲ್ಲಾ ಕಡೆಗಳಲ್ಲೂ ಧನುರ್ಧಾರಿ ವೀರರನ್ನೇ ಕಾವಲಿರಿಸಿದ್ದ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share