ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ 99

199
Share

ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 99
ರಾವಣನ ಮೊದಲ ಯುದ್ಧ :

ಮರುದಿನದ ಯುದ್ಧದಲ್ಲಿ ರಾವಣಾಸುರನೇ ಸ್ವತಃ ರಣರಂಗಕ್ಕಿಳಿದ. ರಾವಣನ ಹೊಡೆತಕ್ಕೆ ಸುಗ್ರೀವ, ಗವಾಕ್ಷರೂ ತತ್ತರಿಸಿಹೋದರು. ಅದನ್ನು ನೋಡಿ ರಾಮಲಕ್ಷ್ಮಣರು ರಾವಣಾಸುರನ ಮೇಲೆ ಯುದ್ಧಕ್ಕೆ ಹೊರಟರು .
‘ ನಾವಿರುವಾಗ ನೀವೇಕೆ ‘ ಎನ್ನುತ್ತ ಹನುಮಂತ ತಾನೆ ರಾವಣನನ್ನೂ ಎದುರಿಸಿದ. ರಾವಣ ಹನುಮಂತರ ನಡುವೆ ಭಯಂಕರವಾದ ಮಲ್ಲ ಯುದ್ಧ ನಡೆಯಿತು. ಒಂದು ಹಂತದಲ್ಲಿ ಇಬ್ಬರೂ ಒಂದೇ ಸಾರಿಗೆ ಮೂರ್ಛೆ ಹೋದರು. ರಾವಣಾಸುರನಿಗೆ ಮೊದಲು ಎಚ್ಚರವಾಯ್ತು . ಇದೇ ಸರಿಯಾದ ಸಮಯವೆಂದು ರಾವಣ ಲಕ್ಷ್ಮಣನನ್ನು ಎತ್ತಿಕೊಂಡು ಹೋಗಲು ನೋಡಿದ. ಆದರೆ ಅದೇನು ವಿಚಿತ್ರವೋ ಲಕ್ಷ್ಮಣನ ಭಾರ ವಿಪರೀತ ಹೆಚ್ಚಾಗತೊಡಗಿತು, ಅವನನ್ನು ಎತ್ತುವುದು ರಾವಣನಿಗೆ ಆಗಲಿಲ್ಲ .
ಅಷ್ಟರಲ್ಲಿ ಮೂರ್ಛೆಯಿಂದ ಎಚ್ಚೆತ್ತ ಹನುಮಂತನು ಈ ಪರಿಸ್ಥಿತಿಯನ್ನು ಗಮನಿಸಿ ಒಂದೇ ನೆಗೆತಕ್ಕೆ ರಾವಣಾಸುರನ ಮೇಲೆ ಬಿದ್ದ. ಆ ಹೊಡೆತಕ್ಕೆ ರಾವಣಾಸುರ ಮೂರ್ಛೆಹೋದ. ಹನುಮಂತನು ಲಕ್ಷ್ಮಣನನ್ನು ಸುರಕ್ಷಿತ ಪ್ರದೇಶಕ್ಕೆ ಸೇರಿಸಿ, ಶ್ರೀರಾಮನನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡು ರಾವಣಾಸುರನ ಮುಂದೆ ಬಂದು ನಿಂತ .
ರಾವಣ ಮೂರ್ಛೆಯಿಂದ ಎಚ್ಚೆತ್ತುಕೊಂಡಾಗ ಅವನಿಗೆ ‘ ರಥ ಏರಿ ಯುದ್ಧಕ್ಕೆ ಬಾ ‘ ಎಂದು ಹೇಳಿದ. ರಾವಣಾಸುರ ಉತ್ಸಾಹದಿಂದ ಯುದ್ಧಕ್ಕಿಳಿದ . ಆ ಯುದ್ಧದಲ್ಲಿ ರಾಮನು ರಾವಣನ ಬಿಲ್ಲನ್ನು ಮುರಿದು, ಅವನ ಸಾರಥಿಯನ್ನು ಕೊಂದು ರಥದ ಚಕ್ರಗಳನ್ನು ಮುರಿದು ಕಿರೀಟವನ್ನು ಛೇದಿಸಿದ . ಕೊನೆಗೆ ರಾವಣ ಮೂರ್ಛೆ ಹೋಗುವಂತೆ ಮಾಡಿದ .
ಸ್ವಲ್ಪ ಹೊತ್ತಿಗೆ ರಾವಣಾಸುರನಿಗೆ ನಿಧಾನವಾಗಿ ಎಚ್ಚರವಾಯ್ತು. ರಾಮನ ಬಾಣದ ಶಕ್ತಿಯೋ ಏನೋ ಅವನಿಗೆ ತುಂಬ ಆಯಾಸವಾಗಿ ನಿಂತುಕೊಳ್ಳಲು ಆಗುತ್ತಿರಲಿಲ್ಲ. ಪ್ರಾಣವೇ ಹೋಗುತ್ತದೇನೋ ಅನಿಸುತ್ತಿತ್ತು.
ಆದರೆ ಊಹೆಗೂ ನಿಲುಕದ ರೀತಿಯಲ್ಲಿ ಶ್ರೀರಾಮ ಹೀಗೆ ಹೇಳಿದ – ರಾವಣ ! ಮಹಾವೀರ ನೀನು ! ಇವತ್ತು ಅನೇಕ ಮಂದಿಯೊಡನೆ ಯುದ್ಧ ಮಾಡಿ ಕೊನೆಗೆ ನನ್ನ ಬಳಿ ಬಂದೆ. ಸ್ವಲ್ಪ ಸುಸ್ತಾದಂತೆ ಕಾಣಿಸುತ್ತಿರುವೆ . ಹೆದರಬೇಡ . ಇವತ್ತು ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊ. ನಾಳೆ ನೇರವಾಗಿ ನನ್ನ ಬಳಿಗೆ ಬಾ. ಆಗ ನೋಡುವೆಯಂತೆ ನನ್ನ ಪರಾಕ್ರಮವನ್ನು ! ರಾವಣನಿಗೆ ಇದಕ್ಕಿಂತ ಘೋರವಾದ ಅಪಮಾನ ಇನ್ನೊಂದಿಲ್ಲ. ಒಂದು ವೇಳೆ ತಾನು ಗೆದ್ದರೂ ಇನ್ನೂ ತನ್ನ ಜನ್ಮ ವ್ಯರ್ಥ ಎಂದುಕೊಂಡ. ಆದರೆ ಏನೂ ಮಾಡಲಾಗದೆ ಮನೆಗೆ ಹಿಂದಿರುಗಿದ . ಮಾರನೆ ದಿನ ಯುದ್ಧದಲ್ಲಿ ಶ್ರೀರಾಮನು ಕುಂಭಕರ್ಣನನ್ನು, ಅತಿಕಾಯನನ್ನು ಸಂಹರಿಸಿದ. ಆ ಮಾರನೇ ದಿನ ಇಂದ್ರಜಿತ್ತು ಮಾಯಾ ಯುದ್ಧ ಮಾಡುತ್ತಾ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದ . ರಾಮಲಕ್ಷ್ಮಣರು ಅದನ್ನು ಕಂಡು ಹಿಡಿದರು. ಬ್ರಹ್ಮಾಸ್ತ್ರಕ್ಕೆ ನಮಸ್ಕಾರಮಾಡಿ ತಲೆಬಾಗಿಸಿದರೆ ಅದು ಏನೂ ಮಾಡುವುದಿಲ್ಲ . ಈ ವಿಷಯ ಗೊತ್ತಿದ್ದ ರಾಮಲಕ್ಷ್ಮಣರು ಸೇನಾಧಿಕಾರಿಗಳಿಗೆ ಆ ವಿಷಯವನ್ನು ಹೇಳಿದರು. ಎಲ್ಲರೂ ಮಲಗಿಕೊಂಡರು. ಎಲ್ಲರೂ ಸತ್ತು ಹೋದರು ಎಂದು ಭಾವಿಸಿ ಇಂದ್ರಜಿತ್ತು ಹಿಂದಿರುಗಿದ.
( ಮುಂದುವರೆಯುವುದು )

* ರಚನೆ – ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share