MP – ಆಧ್ಯಾತ್ಮಿಕ ಅಂಗಳ : 31-07-2021 : ಶ್ರೀಪಾದ ವಲ್ಲಭರ ಚರಿತ್ರೆ : ಪುಟ – 274

345
Share

 

ಶ್ರೀಪಾದ ಶ್ರೀವಲ್ಲಭರ ದಿವ್ಯಚರಿತಾಮೃತ –
ಅಧ್ಯಾಯ 50
ಪುಟ : 274

ತ್ರಿಕರಣ ಶುದ್ಧಿಯ ಅವಶ್ಯಕತೆ

ಮಾನವನು ದಾರಿದ್ರ್ಯದಿಂದ ಮುಕ್ತನಾಗಬೇಕಾದರೆ , ಇಲ್ಲವೆ ಇತರ ಪಾಪಕರ್ಮಗಳಿಂದ ಮುಕ್ತನಾಗಬೇಕಾದರೂ ಮನೋವಾಕ್ಕಾಯಗಳಿಂದ ಪರಿಶುದ್ದನಾಗಿರಬೇಕು . ಇದನ್ನೇ ತ್ರಿಕರಣ ಶುದ್ದಿ ಅನ್ನುತ್ತಾರೆ . ಮನಸ್ಸಿನಲ್ಲಿ ಏನಿದೆಯೋ ಅದೇ ಮಾತಿನಿಂದ ಹೊರಬರಬೇಕು . ಮಾತಿನಿಂದ ಹೊರಬಂದದ್ದೇ ಕರ್ಮರೂಪವಾಗಿ ಮಾಡಲ್ಪಡಬೇಕು . ತ್ರಿಕರಣಶುದ್ಧಿಯನ್ನು ಹೊಂದಿದ ಮಾನವನು ಮಹನೀಯನಾಗುತ್ತಾನೆ .
ಮನಸ್ಸಿನಲ್ಲಿ ಅಂದುಕೊಂಡದ್ದೇ ಒಂದು. ಮಾತಿನ ಮೂಲಕ ಹೊರಬಂದದ್ದು ಮತ್ತೊಂದು , ಈ ಎರಡೂ ಅಲ್ಲದೆ ಮಾಡುವುದು ಇನ್ನೊಂದು . ಇದೇ ತ್ರಿಕರಣ ಶುದ್ಧಿ ಇಲ್ಲದೆ ಹೋಗುವುದು . ಆಗ ಅವನು ದುರಾತ್ಮನಾಗುತ್ತಾನೆ . ಈ ಕಲಿಯುಗದಲ್ಲಿ ಸುಲಭವಾಗಿ ಭವಸಾಗರದಿಂದ ಪಾರಾಗಲು ಅನೇಕ ಮಾರ್ಗಗಳಿವೆ . ಅದರಲ್ಲಿ ನಾಮಸ್ಮರಣೆಯು ಅತ್ಯಂತ ಸುಲಭವಾದದ್ದಾಗಿದೆ . ನಾಮವನ್ನು ನಾಲಿಗೆಯ ಮೇಲೆ ನಾಟ್ಯವಾಡಿಸುವುದರಿಂದ ಪವಿತ್ರವಾದ ಮಾತುಗಳನ್ನಾಡಲು ಅಭ್ಯಾಸವಾಗುತ್ತದೆ . ನಾಮವನ್ನು ಮಾಡುವಾಗ ಮನಸ್ಸು ದೈವದ ಮೇಲೆ ಕೇಂದ್ರೀಕೃತವಾಗುವುದರಿಂದ ಮನಸ್ಸು ಕೂಡಾ ಪ್ರವಿತ್ರವಾಗುತ್ತದೆ . ಆಗ ಪವಿತ್ರ ಕರ್ಮಗಳನ್ನು ಮಾಡಲು ತಾನಾಗಿಯೇ ಪ್ರೇರಣೆ ಉಂಟಾಗುತ್ತದೆ ‘ ಎಂದು ನುಡಿದರು .

ಕರ್ಮ ವಿಮೋಚನೆ

ಒಮ್ಮೆ ಕ್ಷಯವ್ಯಾಧಿ ಪೀಡಿತನೊಬ್ಬನು ಕುರುವಪುರಕ್ಕೆ ಬಂದನು. ಅವನಿಗೆ ಮಧುಮೇಹ ರೋಗವೂ ಇತ್ತು . ಇವುಗಳ ಜೊತೆಗೆ ಇನ್ನೂ ಬೇರೆ ವ್ಯಾಧಿಗಳೂ ಇದ್ದವು . ಅವನನ್ನು ನೋಡಿ ಮಹಾಪ್ರಭುಗಳು ಬಹಳ ಕೋಪೋದ್ರಿಕ್ತರಾಗಿ “ ಇವನು ಪೂರ್ವಜನ್ಮದಲ್ಲಿ ಮಹಾಕಳ್ಳ , ಎಷ್ಟೋ ಅಮಾಯಕರ ಸ್ವತ್ತನ್ನು ಅಪಹರಿಸಿ ಅವರಿಗೆ ಎಲ್ಲಿಲ್ಲದ ಕಷ್ಟಗಳನ್ನು ತಂದೊಡ್ಡಿದ್ದಾನೆ . ಮಗಳ ವಿವಾಹಕ್ಕಾಗಿ ಒಬ್ಬ ತಂದೆಯು ಸಂಗ್ರಹಿಸಿದ್ದ ಹಣವನ್ನು ಕದ್ದನು . ಆತನು ಮಗಳ ಮದುವೆಯನ್ನು ಮಾಡಲಾಗಲಿಲ್ಲ . ಸಕಾಲದಲ್ಲಿ ಮಗಳ ಮದುವೆಯನ್ನು ಮಾಡಲಿಲ್ಲವೆಂದು ಅವನನ್ನು ಕುಲದಿಂದ ಹೊರಹಾಕಿದರು . ವರದಕ್ಷಿಣೆ ಕೊಡಲು ಹಣವಿಲ್ಲದಿದ್ದುದರಿಂದ ಸರಿಯಾದ ಯುವಕರು ಸಿಕ್ಕದೆ ಒಬ್ಬ ವೃದ್ಧನಿಗೆ ಮದುವೆ ಮಾಡಿಕೊಡಲು ಯೋಚಿಸಿದರು . ಆಗ ಆತನ ಮಗಳು ಆತ್ಮಹತ್ಯೆ ಮಾಡಿಕೊಂಡಳು . ಪೂರ್ಣಾಯುಷ್ಯಂತಳಾಗಿದ್ದ ಅವಳ ಬದುಕು ಬೂದಿಯ ಪಾಲಾಗಿತ್ತು ” ಎಂದರು .
ಆ ಕ್ಷಯರೋಗಿಯು ಅತ್ಯಂತ ದೀನತೆಯಿಂದ ಶ್ರೀಪಾದರನ್ನು ಎಷ್ಟೋ ವಿಧವಾಗಿ ಬೇಡಿಕೊಂಡನು . ದಯಾಂತ ಹೃದಯರಾದ ಶ್ರೀಪಾದರು ಅವನನ್ನು ಪಂಚದೇವ ಪಹಾಡ್‌ನಲ್ಲಿ ದರ್ಬಾರಿನ ಗೋಶಾಲೆಯಲ್ಲಿ ಮಲಗಲು ಹೇಳಿದರು . ಅಲ್ಲಿ ಸೊಳ್ಳೆಗಳ ಕಾಟ ಹೇಳತೀರದು . ಅವನಿಗೆ ಕುಡಿಯಲು ನೀರನ್ನೂ ಕೂಡ ಕೊಡಬೇಡಿರೆಂದು ಹೇಳಿದರು .
ಅವನಿಗೆ ರಾತ್ರಿ ಸ್ವಪ್ನದಲ್ಲಿ ರಾಕ್ಷಸರು ಕಾಣಿಸಿಕೊಂಡು ಅವನ ಕಂಠವನ್ನು ಹಿಸುಕಿ ಕೊಲ್ಲುತ್ತಿರುವ ಅನುಭವವನ್ನು ಪಡೆದನು . ಇನ್ನೊಂದು ಕನಸಿನಲ್ಲಿ ಒಂದು ದೊಡ್ಡ ಕಲ್ಲಿನ ಬಂಡೆಯನ್ನು ಅವನ ಎದೆಯ ಮೇಲೆ ಇಟ್ಟಂತಾಯಿತು . ಆ ಬಂಡೆಯ ಮೇಲೆ ಬಲಿಷ್ಠನಾದ ಒಬ್ಬ ಪೈಲ್ವಾನನು ಕುಣಿದಾಡಿದನು . ಈ ಎರಡು ಕನಸುಗಳಿಂದ ಅವನ ಕರ್ಮಫಲವು ಪರಿಪಕ್ವವಾಗಿ ಅವನು ಸ್ವಸ್ಥನಾದನು . ಭೌತಿಕವಾಗಿ ಅನೇಕ ವರ್ಷಗಳು ಬಾಧೆ ಪಡಬೇಕಾದ ದುಷ್ಕರ್ಮ ಯೋಗವನ್ನು ಶ್ರೀಪಾದವಲ್ಲಭರು ಆ ಕ್ಷಯ ಪೀಡಿತನು ಈ ರೀತಿಯಾಗಿ ಮಾನಸಿಕವಾಗಿ ವಿಪರೀತ ಬಾಧೆಗಳನ್ನು ಅನುಭವಿಸುವಂತೆ ಮಾಡಿ ಅವನನ್ನು ಕರ್ಮ ವಿಮುಕ್ತನನ್ನಾಗಿ ಮಾಡಿದರು .

|| ಶ್ರೀಪಾದ ಶ್ರೀವಲ್ಲಭರಿಗೆ ಜಯವಾಗಲಿ ಜಯವಾಗಲಿ ||

( ಮುಂದುವರೆಯುವುದು )
ಕೃಪೆ : ಶ್ರೀ ಕನ್ನೇಶ್ವರ ಪ್ರಕಾಶನ

ಚುಟುಕು ಸಪ್ತಶತಿ : 275

ಇತರರನು ಬೈಯುತ ಸಂತಸಪಡುವರು ಕೆಲರು.
ಅವರ ಸಂತಸಕಾಗಿ ಇತರರಿಗೆ ಕಷ್ಟ.
ನಾನೇನು ಮಾಡದೆಯೇ ತೆಪ್ಪಗಿದ್ದರು ಕೂಡ
ಸಹಿಸಲಾರರು ಇಂಥ ದುಷ್ಟ ಮಂದಿ.
ಬೈದು ಸಂತಸಪಡಲಿ. ನನಗದೇ ಸಂತೋಷ .
ಸರಿಯಲ್ಲವೇ ದೊರೆಯೆ ?
ಸಚ್ಚಿದಾನಂದ ಶ್ರೀ ಸ್ವಾಮೀಜಿ

( ಸಂಗ್ರಹ )
* ಭಾಲರಾ
ಬೆಂಗಳೂರು

ಜೈಗುರುದತ್ತ


Share