MP ಕವನ ಸಂಗ್ರಹ – ನವ ವರುಷದಂಚಿನಲಿ : ಶ್ರೀಮತಿ . ಆಶಾಲತ

127
Share

ನವ ವರುಷದಂಚಿನಲ್ಲಿ
ವರುಷಗಳುರುಳಿದರು, ದಶಕಗಳು ಕಳೆದರು ಬಾರದು ಆ ಹಳೆಯ ಸವಿ ದಿನಗಳು
ಬದಲಾಗದ ಬದುಕಿನ ಬವಣೆಗಳು
ಸಮಸ್ಯೆಗಳು ಚಕ್ರ ವ್ಯೂಹದಂತೆ ಸುತ್ತುವರಿದಿವೆ
ಜೀವನ ಚಕ್ರದಿ ಅಂತ್ಯವಿಲ್ಲದಂತೆ ತಿರುಗುತ್ತಿವೆಯಿಲ್ಲಿ
ನವ ವರುಷದಂಚಿನಲ್ಲಿ ಹೊಸತನದ
ಸುಳಿವಿಲ್ಲ ||1||
ಬದಲಾಗದ ಸಂಕುಚಿತ ಮನಗಳು
ಬದಲಾಗದ ಸ್ವಾರ್ಥ ಪ್ರಪಂಚ
ಬದಲಾಗದ ನೀತಿ, ನಿಯಮಗಳು
ಅಪ್ಪ ನೆಟ್ಟಲಾಕ್ಕೆ ಜೋತು ಬೀಳುವ ಮಂದಿ
“ದೇವನೊಬ್ಬ ನಾಮ ಹಲವು, ಮನುಜಮತ ವಿಶ್ವಪಥ” ವೆಂದು
ಸಾರಿದ ನಾಡಲ್ಲಿ ಪ್ರತಿ ದಿನ ಉದ್ಭವಿಸುತ್ತಿವೆ ಹೊಸ, ಹೊಸ ದೈವಗಳು, ದೇವಾಲಯಗಳು ||2||
ಸ್ವಾರ್ಥಪರ ಜಗದಿ ನಿಸ್ವಾರ್ಥ ಜೀವಿಗಳ ಹುಡುಕಾಟ
ಮಹಾಮಹಿಮರು,ಸಾಧ್ವಿಗಳು
ಉದಯಿಸಿದ ನಾಡಲ್ಲಿ ಮಾನವ ರೂಪಿನ ದಾನವರ ಜನನ
ರಕ್ತ ಪಿಪಾಸುಗಳಾಗಿ ಪಾಶವಿಕೃತ್ಯ
ನಡೆಸಿರುವರಿಲ್ಲಿ
ಒಂದೆಡೆ ಅತ್ಯಾಚಾರ, ಅನಾಚಾರಗಳು ಮತ್ತೊoದೆಡೆ
ರೌದ್ರ, ಭೀಭತ್ಸ ಕೃತ್ಯಗಳು
ಸ್ಥಿರವಿರದ ಬದುಕಿಗಾಗಿ ಏನೆಲ್ಲಾ
ದುಷ್ಕಾರ್ಯಗಳು
ನವ ವರುಷದಂಚಿನಲ್ಲಿ
ಹೊಸತನದ ಸುಳಿವಿಲ್ಲ ||3||
ಕವಿವಾಣಿ, ದೇವವಾಣಿಗಳೆಲ್ಲಾ
ಧೂಳಿಪಟವಾಗಿವೆ
ಜನುಮ ದಿನಾಚರಣೆ, ಶ್ರದ್ದಾಂಜಲಿ ಕಾರ್ಯಗಳಿಗೆ ಮಾತ್ರ ಸೀಮಿತರಾಗಿಹರು ಕವಿವರ್ಯರು,
ಮಹಾಮಹಿಮರು
ರಾಜಕಾರಣಿಗಳ ಸ್ಥಾನಭದ್ರತೆಗಾಗಿ
ಸಜ್ಜಾಗಿಹುದು ರಂಗಮಂಟಪವಿಲ್ಲಿ
ನವ ವರುಷದಂಚಿನಲ್ಲಿ ಹೊಸತನ ದ ಸುಳಿವಿಲ್ಲ ||4||
ಬಣ್ಣದ ವೇಷವಿಲ್ಲದೆ ರಂಗು ರಂಗಿನ ಪಾತ್ರಗಳು ರಾಜಕಾರಣದ ಚದುರಂಗದಾಟಕ್ಕೆ ಸಿದ್ದಗೊಂಡಿಹವು, ಕ್ಷಣಿಕ ಆಮಿಷಗಳಿಗೆ ಬಲಿಯಾಗಿರುವರು
ಜನರು
ಸಾಮಾನ್ಯನ ಅಸಾಮಾನ್ಯ ಬವಣೆಗಳು ದ್ವಿಗುಣವಾಗಿವೆ
ಹೊಸ ವರುಷದಂಚಿನಲ್ಲಿ ಹೊಸತನದ ಸುಳಿವಿಲ್ಲ ||5||
ಎಂ. ಎಸ್. ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆಶಾಖೆ

Share