ಲಕ್ಷ್ಮೀ ಸರಸ್ವತಿ ಭಾರತಿ ಪಾರ್ವತಿ : ಪಾತ್ರ ಹಾಗೂ ಪ್ರಭಾವ

179
Share

ಲೇಖನ :- ಹರಿದಾಸರ ಚಿಂತನೆಯಲ್ಲಿ

ಹರಿದಾಸರು ವರ್ಣಿಸಿದ ದೇವತೆಗಳಾದ *(ಲಕ್ಷ್ಮಿ,ಸರಸ್ವತಿ,ಭಾರತಿ,ಪಾರ್ವತಿ ದೇವಿಯರು)*ಹಾಗೂ ಅವರ ಪಾತ್ರ ನಮ್ಮ ಜೀವನದಲ್ಲಿ ಎಷ್ಟು ಪ್ರಭಾವತೆಯಿಂದ ಕೂಡಿದೆ ಎಂಬುದರ ಬಗ್ಗೆ ಹರಿದಾಸರ ಕೃತಿಗಳಿಂದ ತಿಳಿದುಕೊಳ್ಳೋಣ

ಲೌಕಿಕ ಹಿತದ ಜೊತೆಗೆ ಪಾರಮಾರ್ಥಿಕ ಸತ್ಯದ ಕಡೆಗೆ ಸಾಮಾನ್ಯರ ಮನಸ್ಸು ಆಕರ್ಷಿಸಿದ ಹರಿದಾಸರು, ಜಗದ ಏಳಿಗೆಯನ್ನು ಕನ್ನಡದ ಸಿರಿಗಂಧದ ಕೀರ್ತನೆ ಸಾಹಿತ್ಯದ ಮೂಲಕ ಮಾಡಿದ್ದಾರೆ ಎಂದರು. ಹರಿದಾಸರು ಜ್ಞಾನದ ಮೂಲಕ ಸಮಾಜದಲ್ಲಿನ ನ್ಯೂನತೆ ಮತ್ತು ಅಂಧಕಾರವನ್ನು ಹೋಗಲಾಡಿಸಿ, ಭಕ್ತಿಯ ಬೀಜ ಬಿತ್ತಿದ್ದಾರೆ ಸಾಮಾನ್ಯ ಸಾಧಕನ ಜೀವನ ಸಮೃದ್ಧಗೊಳಿಸಲು ಶ್ರಮಿಸಿದ್ದಾರೆ’.

ಲಕ್ಷ್ಮಿ ಚಿಂತನೆ

ಲಕ್ಷ್ಮಿ ದೇವಿ ವೇದಾಭಿಮಾನಿ ದೇವತೆ. ಸಿರಿ ಸಂಪತ್ತಿನ ಒಡತಿ, ಶ್ರೀನಿವಾಸನ ವೃಕ್ಷಸ್ಥಳವಾಸಿನಿ. ಅನಂತ ಗುಣಗಳಿಂದ ಶ್ರೇಷ್ಠಳು.
ಶ್ರೀ ವಾದಿರಾಜರು ರಚಿಸಿದ ಕೃತಿಯಲ್ಲಿ
“ಕಾಯೇ ಶ್ರೀಕಾಮಲಾಲಾಯೆ /ಕಲ್ಲೂರನೀಲಯೇ /ಪ ನೊಂದಿರುವೆ ಸಂಸಾರದಿ ಸತಿಸುತರ ಸಂದಣಿ ಬೆಂದೆನೋ ಮಾನದಿ……………. ಶ್ರೀ ಹಯವದನ ವ್ಯಾಸನ /ಶೋಭಿಸುವ ಮೂರ್ತಿಯನು ಮನದಿ ವಿಭಾಸಿಸೈ ಶಾಣಾಶ್ಮಬಿಂಬಿತೆ
ಅಂದರೆ ಶ್ರೀ ಹರಿಯ ವೃಕ್ಷಸ್ಥಳವಾಸಿಯಾದ ಲಕ್ಷ್ಮಿ ದೇವಿಯನ್ನು ಬೇಡುತ್ತಿದ್ದಾರೆ. ಈ ಸಂಸಾರದಲ್ಲಿ ಬಹಳ ನೊಂದಿರುವೆನು. ತಾಯಿ ತನ್ನ ಮಗುವನ್ನು ರಮಿಸುವಂತೆ, ನನ್ನನ್ನು ಕರುಣೆಯಿಂದ ನೋಡಿ ಕರುಣಿಸು ಎಂದು ಹೇಳುತ್ತಾ, ಲಕ್ಷ್ಮಿ ತಾಯಿಯೇ ತ್ರಿಗುಣಳಾದ ಸತ್ವ ರಾಜೋ ತಾಮೋ ಮೂರು ಗುಣಗಳಲ್ಲಿ ಶ್ರೀ ಭೂ ದುರ್ಗಾ ರೂಪದಿಂದ ಅಣುತೃ ನಾದಿಯಲ್ಲಿ ವ್ಯಾಪಿಸಿರುವೆ, ದುರ್ಜನರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸಿರುವ ಕೋಕಿಲ ವಾಣಿ, ಆಭ್ರ೦ಣಿ ತಾಯಿ ನನ್ನ ಮನದಲ್ಲಿ ನಿಂತು ಉದ್ದರಿಸು ಎಂದು ಬೇಡಿದ್ದಾರೆ.
ಶ್ರೀ ಪ್ರಸನ್ನ ವೆಂಕಟದಾಸರು ತಮ್ಮ ಕೃತಿಯಾದ
*” ನಡೆದು ಬಾರಮ್ಮ ಲಕ್ಷ್ಮಿ ದೇವಿ ನಡೆಮುಡಿಯ ಹಾಸುವೆ /ನಡೆಮುಡಿಯ ಹಾಸಿ ನಿನ್ನ ಚರಣ ಕಮಲಕ್ಕೇರಗುವೆ………….. ಎಷ್ಟು ಬೇಡಿದರು ದಯ ಏಕೆ ಬರಲಿಲ್ಲ ಲಕ್ಷ್ಮಿ ನಿನಗೆ /ಇಷ್ಟ ಪ್ರಸನ್ನ ವೆಂಕಟ ವಿಠ್ಠಲ ನ ರಾನಿಯೇ /೩ ಎಂದಿದ್ದಾರೆ.
ಅಂದರೆ ಈ ಕೃತಿಯಲ್ಲಿ ಲಕ್ಷ್ಮಿ ದೇವಿಯನ್ನು ಆರ್ತ ಧ್ವನಿಯಿಂದ ನಿನಗೆ ನಾನಾ ತರಹ ಹೂಗಳಿಂದ ಶೃಂಗಾರ ಮಾಡಿರುವೆ,ಪರಿಪರಿಯಾದ ಭಕ್ಷ್ಯ ಮಾಡಿರುವೆ, ವೈಭವದಿಂದ ಪೂಜೆ ಮಾಡಿ ವರವನ್ನು ಬೇಡಿದರು ನನ್ನ ಉದ್ದಾರ ಮಾಡಲು ದಯ ಬರಲಿಲ್ಲವೇ ಅಂದಿದ್ದಾರೆ.
ಈ ಕೃತಿಯಲ್ಲಿ ಅಪರೋಕ್ಷವಾಗಿ ನಮ್ಮಂತ ಅಜ್ಞಾನಿಗಳಿಗೆ ಹೇಳಿದ್ದಾರೆ. ಏಕೆಂದರೆ ವೈಭವದಿಂದ ಪೂಜೆ ಮಾಡಿ, ದಕ್ಷಿಣಾದಿಗಳನ್ನು ಕೊಟ್ಟರೆ, ನಮ್ಮ ತಪ್ಪುಗಳನ್ನು ಕ್ಷಮಿಸುತ್ತಾನೆ ಎಂದು ಸುಳ್ಳಿನ ಭ್ರಮೆಯಲ್ಲಿ ಇದ್ದೇವೆ, ಆದರೆ ನಾವು ಏನೇ ಮಾಡಿದರು ಪ್ರಾರಬ್ಧ ಕರ್ಮಗಳು ಬಿಡುವುದಿಲ್ಲ.
ಅದಕ್ಕೆ ಶ್ರೀ ಜಗನ್ನಾಥ ದಾಸರು ಕರುಣಾಸಂಧಿಯ ೧೩ ನುಡಿಯಲ್ಲಿ ಶೇಷನು ನಿಧಿಯ ನಿಜವಾದ ಒಡೆಯ ಬರುವವರಿಗೂ ಅದನ್ನು ಕಾಯ್ದು ಅದರ ಮಾಲಿಕನಿಗೆ ಒಪ್ಪಿಸುತ್ತದೆ. ಅದೇ ರೀತಿ ನಮ್ಮ ಕರ್ಮಗಳು ನಮಗೆ ಬರೆದಿರುತ್ತವೆ, ಆದರೆ ಕಾಲ ತಕ್ಕಂತೆ ಉಣ್ಣಬಡಿಸುತ್ತಾನೆ ಭಗವಂತ. ಬಂದದ್ದನ್ನು ದೇವರು ಕೊಟ್ಟ ಪ್ರಸಾದವೆಂದು
ಆದ್ದರಿಂದ ಲಕ್ಷ್ಮಿ ದೇವಿಯನ್ನು ನಿರ್ಗವಿಯಾಗಿ ಪೂಜಿಸಬೇಕು

ಸರಸ್ವತಿ ಚಿಂತನೆ

ಬ್ರಹ್ಮ ದೇವರ ಪತ್ನಿ, ವಾಗಭಿಮಾನಿ ದೇವತೆ,
ಶ್ರೀಪಾದ ರಾಜರು ತಮ್ಮ ಕೃತಿಯಾದ
ನಲಿದಾಡೆ ಎನ್ನ ನಾಲಿಗೆ ಮ್ಯಾಲೆ ಶಾರದಾ ದೇವಿ
ಕುಣಿದಾಡೆ ಎನ್ನ ನಾಲಿಗೆ ಮೇಲೆ………….,
ಶೃಂಗಾರವಾದ ಜಡೆ /ರಾಗುಟಿ ಚೌರಿ /ರಂಗು ಮನೋಹರ ಮಂದ ಅರವಿಂದ ನಯನೆ ಸಿರಿ ರಂಗವಿಠಲ್ ತೋರೆ ಶುಭಾ೦ಗಿ.
ಈ ಕೃತಿಯಲ್ಲಿ ಸರಸ್ವತಿಯ ಶೃಂಗಾರವನ್ನು ವರ್ಣಿಸುತ್ತಾ ನನ್ನ ನಾಲಿಗೆ ಮೇಲೆ ನಲಿಕುಣಿ ಎಂದಿದ್ದಾರೆ. ಅಂದರೆ ಸುಜ್ಞಾನವನ್ನು ಕೊಟ್ಟು ಸತ್ ಚಿಂತನೆಯಿಂದ ನುಡಿಯುವಂತಾಗಲಿ ಎಂದು ಬಿಡಿದ್ದಾರೆ.
“ಪಾಲಿಸೆಮ್ಮ ಮುದ್ದು ಶಾರದೆ
ಎನ್ನ ನಾಲಿಗೆಯಲಿ ನಿಲ್ಲ ಬಾರದೆ
ಲೋಲಲೋಚನೆ ತಾಯಿ ನಿರುತ ನಂಬಿದೆ ನಿನ್ನ ||ಅಪ|| ಅಕ್ಷರಕ್ಷರ ವಿವೇಕವ | ನಿನ್ನ|”
ಈ  ಮೇಲಿನ ಕೃತಿಯಲ್ಲಿ ಶ್ರೀ ಪುರಂದರ ದಾಸರು ಬ್ರಹ್ಮನ ರಾಣಿಯದ ಸರಸ್ವತಿ ದೇವಿಯನ್ನು
ವರ್ಣಿಸುತ್ತಾ ನನ್ನ ನಾಲಿಗೆ ಮೇಲೆ ನಲಿದಾಡೆ ಎಂದು ವರ್ಣಿಸಿದ್ದಾರೆ. ಅಂದರೆ ಜ್ಞಾನವನ್ನು ಕೊಟ್ಟು ಉದ್ದರಿಸು ತಾಯಿ ನಿರತವಾಗಿ ನಿನ್ನನ್ನು ಸ್ತುತಿಸುವೆ ಎಂದಿದ್ದಾರೆ.

ಭಾರತಿ ದೇವಿ

ಭಾರತಿ ದೇವಿ ವಾಯುದೇವರ ಪತ್ನಿ.
ಶ್ರೀ ವರದ ಗೋಪಾಲ ವಿಠ್ಠಲ ದಾಸರು
“ಶರಣ ಜನರನೆಲ್ಲ ಪೊರೆವ ಭಾರತಿ ನಿನ್ನ ಚರಣಕೆ ಕೈ ಮುಗಿವೆ /ಪ…………… ಮಾತೆ ಎನ್ನಯ ಒಂದು ಮಾತು ಲಾಲಿಸುವುದು /ವಾತನ ನಿಜದಯಿತೆ
ಪ್ರಖ್ಯಾತೆ /ದಾತ ಶ್ರೀ ವರದ ಗೋಪಾಲ ವಿಠಲ್ ಆತುಮದೋಳು ನಿಲ್ಲಿಸೆ ಎಂದಿದ್ದಾರೆ.
ಅಂದರೆ ವಾಯುದೇವರು ನಿತ್ಯ ನಮ್ಮ ಉಸಿರಾಟದಲ್ಲಿ ನಿಂತು ಭಗವಂತನನ್ನು ಜಪಿಸುತ್ತಿರುತ್ತಾರೆ. ನಮ್ಮ ಶರೀರದಲ್ಲಿ ವಾಯುದೇವರು (ಉಸಿರಾಟದಲ್ಲಿ ) ಇಲ್ಲದಿದ್ದರೆ
ಹೆಣ ಅನಿಸಿಕೊಳ್ಳುತ್ತೇವೆ. ಅಂತಹ ವಾಯುದೇವರ ಪತ್ನಿಯಾದ ಭಾರತಿದೇವಿಯಲ್ಲಿ ವರ್ಣಿಸಿಸ್ತುತಿಸಿ,
ನನ್ನ ವದನದಲ್ಲಿ ಭಗವಂತನ ನಿತ್ಯ ಸ್ತುತಿ ಇರುವಂತೆ ಮಾಡು, ಅರಿಷಡ್ ವರ್ಗಗಳ ಕಾಮದಿಗಳನ್ನು ಗೆದ್ದು ಅಂತರಗದಲ್ಲಿ ಎಂದು ಹಿಂಗದದಂತೆ ಸುಸ್ಥಿರವಾದ ಸುಮನಸ್ಸು ಕೊಟ್ಟು ಸುಜ್ಞಾದಿಂದ ಇರುವಂತೆ ಮಾಡು, ಸಂಸಾರದಲ್ಲಿ ಬರುವ ಕಷ್ಟಗಳನ್ನು ಸಹಿಸುವ ಧೈರ್ಯ ಕೊಡು ಕರುಣಿಸು ಎಂದಿದ್ದಾರೆ.
ಇನ್ನು ಶ್ರೀ ಗೋಪಾಲ ವಿಠಲ್ ದಾಸರು
“ಭಾರತಿ ಜನನಿ ಪಾಲಿಸೆ ನಿತ್ಯ ಮಾರುತನ ರಾಣಿ
/ಪ………….. ನಂಬಿದೆ ನಿನ್ನ ಪಾದಯುಗಾ೦ಬುಜ
ದಿಂಬು ತೋರೆನಗೆ ನಿಜ / ಕ೦ಬು ಚಕ್ರಾಂಕಿತ ಗೋಪಾಲ ವಿಠ್ಠಲ್ /ಅಂಬಕದಲ್ಲಿ ನೋಳ್ಪ ಸಂಭ್ರಮ ಪಾಲಿಸೆ /
ಈ ಮೇಲಿನ ಕೃತಿಯಲ್ಲಿ ಎಲ್ಲರಿಗೂ ನೀನು ಜ್ಞಾನ ಶುಭಧಾಯಕಳು, ಸಾಧನ ಶರೀರಕ್ಕೆ ಸಾಧನೆ ಮಾಡಿಸುವಳು ನೀನು, ಶಾಪ ವಿಮೋಚಕಿ, ಬಂದ ಕಷ್ಟಗಳನ್ನು ಪರಿಹರಿಸುವವಳು ಎಂದಿದ್ದಾರೆ.

ಪಾರ್ವತಿ*

ಮನೋನಿಯಾಮಕ ರುದ್ರದೇವರ ಪತ್ನಿ.
ಪಾರ್ವತಿಯು ಶಕ್ತಿಯುತ, ಆದಿಸ್ವರೂಪದ ಮಾತೃದೇವತೆ ಮತ್ತು ಹಲವಾರು ಭಯಂಕರ ರೂಪಗಳನ್ನು ಹೊಂದಿದ್ದಾಳೆ ಮತ್ತು ಗೌರಿ, ದುರ್ಗಾ , ಕಾಳಿ , ಹತ್ತು ಮಹಾವಿದ್ಯೆಗಳು ಮತ್ತು ನವದುರ್ಗೆಯರು ಮತ್ತು ಇತರ ರೂಪಗಳಲ್ಲಿ ದುಷ್ಟ ಜೀವಿಗಳನ್ನು ಕೊಂದಳು.
ಶ್ರೀದ ವಿಠ್ಠಲ್ ದಾಸರು ಮಾತಾಡೇ /ಪ
ಮಾತಾಡೇ ಎನ್ನ ಮೌನದ ಗೌರಿ /ಯಾತಕ ಮನ ಸೋತವನೊಡನೆ………. ಆಧಾರಿಸುವೇನಾ
ಎಂದಿದ್ದಾರೆ. ಅಂದರೆ ತ್ರಿಗುಣ ಜೀವರಲ್ಲಿ ತ್ರಿಗುಣಾತ್ಮಿಕೆಯಾಗಿ ಇರುವಳು. ಹೀಗಾಗಿ ಪರಶಿವನನ್ನು ಒಲಿಸಿಕೊಂಡವಳು ಇಂತಹ ಪಾರ್ವತಿ ದೇವಿಯನ್ನು ವರ್ಣಿಸಿ ಮೌನವಾಗಿ ಇದ್ದು ಇದ್ದು ದುಷ್ಟರನ್ನು ಶಿಕ್ಷಸಿಸುವಾಗ ಭದ್ರ ಕಾಳಿಯಾಗಿ ಕ್ರೋಧದಿಂದ ನಿಗ್ರಹಿಸುತ್ತಾಳೆ. ಇದನ್ನು ವರ್ಣಿಸಿದ್ದಾರೆ. ಶಿವ ಪಾರ್ವತಿಯವರು ಅರ್ಧನಾರೇಶ್ವರರು.
ಒಟ್ಟಾರೆ ಹರಿದಾಸರು ವರ್ಣಿಸಿರುವ ಲಕ್ಷ್ಮಿ,ಸರಸ್ವತಿ,ಭಾರತಿ,ಪಾರ್ವತಿಯರ ಬಗ್ಗೆ ತಿಳಿದುಕೊಳ್ಳುವದೇನೆದರೆ ಶ್ರೀ ಹರಿಯ ಲಕ್ಷ್ಮಿ ಯನ್ನು ತನ್ನ ಹೃದಯದಲ್ಲಿ ಸ್ಥಾನ ಕೊಟ್ಟರೆ, ಬ್ರಹ್ಮನು ಸರಸ್ವತಿಯನ್ನು ತನ್ನ ತೊಡೆಯಮೇಲೆ ಸ್ಥಾನ ಕೊಟ್ಟರೆ, ಇನ್ನು ವಾಯುದೇವರು ಭಾರತಿದೇವಿಯನ್ನು ತಮ್ಮ ಜೊತೆ ಶ್ವಾಸ ಕಾರ್ಯದಲ್ಲಿ ಭಾಗಿತ್ವ ಕೊಟ್ಟರು, ಇನ್ನು ಶಿವ ಪಾರ್ವತಿಯರು ಅರ್ಧನರೇಶ್ವರರಾದರು. ಹೀಗೆ ಎಲ್ಲ ದೇವಿಯರಿ೦ದ ಕಲೆತುಕೊಳ್ಳುಬೇಕಾಗಿದ್ದು
ಏನೆಂದರೆ ಇವರ ಸಹನಾ ಶಕ್ತಿ, ಜ್ಞಾನ, ಪತಿಯ ಜೊತೆ ಸಹಬಾಳ್ವೆಯನ್ನು ಕಳೆತುಕೊಳ್ಳಬೇಕು..
ಹಾಗೇ ನಮ್ಮ ದೇಹದ ಬೇರೆ ಬೇರೆ ಅಂಗಾಗಳಿಗೆ ಪರಿಣಿತ ವೈದ್ಯರು ಇರುವರೋ ಹಾಗೇ ನಮ್ಮ ದೇವ ದೇವತೆಗಳಲ್ಲೂ ತತ್ವಭಿಮಾನಿ ದೇವತೆಗಳು ಇದ್ದಾರೆ. ಈ ನಾಲ್ಕು ದೇವತೆಗಳು ಒಂದೊಂದು ತತ್ವಭಿಮಾನಿ ದೇವತೆಗಳು ಸರ್ವರಲ್ಲೂ ನಿಂತು ಕಾರ್ಯ ನಿರ್ವಹಿಸುತ್ತಾರೆ.
ಹೀಗಾಗಿ ದಾಸರ ಕೃತಿಗಳು ಎಲ್ಲ ರೀತಿಯಿಂದ ನಮಗೆ ನೀತಿ ಪಾಠ ಹೇಳುತ್ತದೆ.

✍️ ಪ್ರಿಯಾ ಪ್ರಾಣೇಶ ಹರಿದಾಸ


Share