ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ 73

210
Share

ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ 73
ಓಂ ನಮೋ ಹನುಮತೇ ನಮಃ

15. ನಮ್ಮ ವಿಭೀಷಣ ಎಲ್ಲಿ? ಎಂದು ಅತ್ತಿತ್ತ ನೋಡಿದೆ! ಆಶ್ಚರ್ಯ! ಅವನು ಬಿಳಿ ವಸ್ತ್ರಗಳನ್ನು ಉಟ್ಟುಕೊಂಡು, ಬಿಳಿ ಹೂಮಾಲೆ ಧರಿಸಿ, ಬಿಳಿಯ ಗಂಧವನ್ನು ಬಳಿದುಕೊಂಡು ಸಂತೋಷದಿಂದ ನಗುತ್ತಿರುವುದು ಕಾಣಿಸಿತು. ಯಾರೋ ಅವನ ತಲೆಯಮೇಲೆ ಶ್ವೇತಛತ್ರವನ್ನು ಹಿಡಿದಿದ್ದರು. ಅದು ಯಾರೆಂದು ಸರಿಯಾಗಿ ಕಾಣಿಸುತ್ತಿಲ್ಲ. ಇನ್ನು ಕೆಲವರು ಅವನ ಸುತ್ತ ಸೇರಿ ಬಿಳಿ ಶಂಖವನ್ನು ಊದುತ್ತಿದ್ದಾರೆ. ಜಯಭೇರಿ ಮೊಳಗಿಸುತ್ತಿದ್ದಾರೆ. ಮಂಗಳವಾದ್ಯಗಳನ್ನು ನುಡಿಸುತ್ತಿದ್ದಾರೆ.
16. ಮುಂಚೆ ಕಾಣಿಸಿದ ಬಿಳಿ ಆನೆ ಪುನಃ ಬಂತು. ಈಗ ಅದರ ಅಂಬಾರಿ ಖಾಲಿಯಾಗಿತ್ತು. ವಿಭೀಷಣನೂ, ಅವನ ನಾಲ್ವರು ಮಂತ್ರಿಗಳೂ ಅದನ್ನೇರಿದರು. ಅವರನ್ನು ಹತ್ತಿಸಿಕೊಂಡು ಅದು ಆಕಾಶದಲ್ಲಿ ಲಂಕಾ ಪಟ್ಟಣದಮೇಲೆ ಪ್ರದಕ್ಷಿಣೆ ಮಾಡುತ್ತಿತ್ತು.
17. ಅವನೊಬ್ಬನನ್ನು ಬಿಟ್ಟು, ಉಳಿದ ನಮ್ಮ ರಾಕ್ಷಸರೆಲ್ಲರೂ ಕೆಂಪುಬಟ್ಟೆ ಉಟ್ಟು, ಎಣ್ಣೆ ಕುಡಿಯುತ್ತಾ, ಬಿದ್ದು ಬಿದ್ದು ಹೋಗುತ್ತಿದ್ದರು. ನಮ್ಮ ನಗರದ ದ್ವಾರಗಳು ಕುಸಿದು ಬೀಳುತ್ತಿವೆ. ಸಮುದ್ರ ಉಕ್ಕಿ ನಮ್ಮ ಊರಿಗೆ ಊರೇ ಸಮುದ್ರದಲ್ಲಿ ಮುಳುಗಿಹೋಯಿತು.
18. ಅದಕ್ಕಿಂತ ಆಶ್ಚರ್ಯ ಇನ್ನೊಂದು ಕಾಣಿಸಿತು. ರಾಮನ ದೂತನಂತೆ ಒಬ್ಬ ವಾನರನು ನಮ್ಮ ಊರೊಳಗೆ ಬಂದ. ಅವನು ಬರುತ್ತಿದ್ದರೆ ಆಕಾಶದಲ್ಲಿ ದೇವತೆಗಳು ಅವನನ್ನು ಕೊಂಡಾಡುತ್ತಿದ್ದರು. ಆ ವಾನರನು ನಮ್ಮಲ್ಲಿ ಅನೇಕರನ್ನು ಸಾಯಿಸಿ, ನಮ್ಮ ಊರಿಗೆ ಬೆಂಕಿ ಇಟ್ಟು ಸುಟ್ಟುಹಾಕಿದ. ಅನೇಕ ಸೌಧಗಳು ಉರಿದು ಬೂದಿಯಾದವು.
19. ಪರಿಸ್ಥಿತಿ ಹೀಗಿರುವಾಗ ಅಳಬೇಕಾಗಿದ್ದ ನಮ್ಮ ರಾಕ್ಷಸ ಸ್ತ್ರೀಯರು ಕಂಠಪೂರ್ತಿ ಕುಡಿದು ಆ ಬೂದಿಯ ರಾಶಿಯ ಮೇಲೆ ನಾಟ್ಯ ಆಡುತ್ತಿದ್ದಾರೆ.
20. ಲೇ ಹುಡುಗೀರಾ! ನನಗೆ ಕಾಣಿಸಿದ ದೃಶ್ಯಗಳು ಇವು. ನಾನು ಈಗ ಹೇಳುವ ಮಾತುಗಳನ್ನು ಹುಷಾರಾಗಿ ಕೇಳಿ. ಈ ಸೀತಾದೇವಿಯ ಗಂಡ ಸಾಮಾನ್ಯದವನಲ್ಲ. ಅವನು ನಮ್ಮ ಸಮುದ್ರ ದಾಟಿ ಬಂದೇ ಬರ್ತಾನೆ. ಬಂದು ಊರಿನಲ್ಲಿರುವ ಎಲ್ಲರನ್ನೂ – ನನ್ನನ್ನೂ, ನಿಮ್ಮನ್ನೂ – ಸಂಹರಿಸುತ್ತಾನೆ.
21. ಈ ಸೀತೆ ಏನೂ ಸಾಮಾನ್ಯದವಳು ಅಂದ್ಕೋಬೇಡಿ. ಗಂಡನ ರಾಜ್ಯ ಹೋದಾಗ, ಅವನು ಅಡವಿಯ ಪಾಲಾದಾಗ, ಅವನನ್ನು ಹಿಂಬಾಲಿಸುವಂಥವರು ನಮ್ಮೂರಿನಲ್ಲಿ ಯಾರಾದರೂ ಇದ್ದಾರೆಯೇ? ಇವಳು ಹಾಗೆ ಮಾಡಿದವಳು ಈಗ ನೀವೇ ಹೇಳಿ! ಇವಳು ಎಂತಹ ಮಹಾನ್ ಪತಿವ್ರತೆ!
22. ಆದ್ದರಿಂದ, ಹುಡುಗೀರಾ! ಎಚ್ಚೆತ್ಕೊಳ್ಳಿ. ಇವಳ ಪ್ರಾಣ ಕಿತ್ತು ತಿನ್ನ ಬೇಡಿ. ಅವಳನ್ನು ಒಲಿಸಿಕೊಳ್ಳಿ. ನಮ್ಮನ್ನು ಕಾಪಾಡಬಲ್ಲ ಶಕ್ತಿ ಇರುವುದು ಇವಳೊಬ್ಬಳಿಗೇ.
25. ಅಷ್ಟೇಕೆ, ಅವಳ ಎಡಗಣ್ಣು, ಎಡಭುಜಗಳನ್ನು ನೋಡಿ! ಮೆಲ್ಲಗೆ ಅದುರುತ್ತಿಲ್ಲವೇ? ಈ ದುರ್ದಶೆಯಲ್ಲಿ ಅವು ಅದುರುತ್ತಿವೆಯೆಂದರೆ, ಅದು ಯಾರಿಗೆ ಶುಭ? ಅವಳಿಗೇ ಅಲ್ವೇ?
26. ಅದೋ ಆ ಪಿಂಗಳಪಕ್ಷಿ (ಶಕುನದ ಹಕ್ಕಿ) ಯನ್ನು ನೋಡಿ. ಅದು ಗೂಡಲ್ಲಿ ಕೂತುಕೊಂಡು ಒಂದೇ ಸಮ ಕೂಗುತ್ತಿದೆ. ಅದು ಹಾಗೆ ಕೂಗಿದರೆ ‘ತಥಾಸ್ತು’ ಅಂದಂತೆ ಲೆಕ್ಕ.
27. ಆದ್ದರಿಂದ ನೀವು ಅತಿಯಾಗಿ ಆಡುವುದನ್ನು ಸ್ವಲ್ಪ ಬಿಟ್ಟು, ಇವಳಿಗೆ ಅನುಕೂಲವಾಗಿ ನಡೆದುಕೊಳ್ಳುವುದನ್ನು ಕಲಿಯಿರಿ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share