ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 92

202
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 92
ಓಂ ನಮೋ ಹನುಮತೇ ನಮಃ

660) ಅದೊಂದು ದೊಡ್ಡ ಸರೋವರ. ಹತ್ತಿರದಲ್ಲೇ ಒಂದು ದೊಡ್ಡ ಶಮೀವೃಕ್ಷ (ಬನ್ನಿಮರ) ಇತ್ತು. ಹನುಮಂತ ಅದನ್ನು ಏರಿ, ಸುತ್ತ ಮುತ್ತ ಏನಿದೆ ಎಂದು ಪರಿಶೀಲಿಸಿದ.
661) ಕೊಳದ ಅತ್ತಕಡೆ ರಾಜಸ್ತ್ರೀಯಂತೆ ಇದ್ದ ಮಹಿಳೆಯೊಬ್ಬಳು ಅಳುತ್ತಿರುವುದು ಕಾಣಿಸಿತು. ಅವಳ ಕಾಲುಗಳಲ್ಲಿ ಸಂಕೋಲೆ ಇತ್ತು. ಕೈಯಲ್ಲಿ ಬಂಗಾರದ ಕೊಡ ಇತ್ತು. ಅವಳ ಮುಖದಲ್ಲಿ ರಾಕ್ಷಸ ಜಾತಿಗೆ ಅಸಹಜವಾದ ಸತ್ವಗುಣ ಕಾಣುತ್ತಿತ್ತು.
ದುರ್ದಂಡಿಗೆ ವರಪ್ರಾಪ್ತಿ
662) ಹನುಮಂತ ಅವಳ ವಿಷಯವನ್ನು ತಿಳಿದುಕೊಳ್ಳಲು ಅವಳ ಹತ್ತಿರ ಹೋದ. ಹತ್ತಿರ ಹೋದಾಗ ಗೊತ್ತಾಯಿತು – ಅವಳು ಅಳುದನಿಯಲ್ಲಿ ರಾಮಭಜನೆ ಮಾಡುತ್ತಿದ್ದಳು.
663) ಹಾಗೇ ಸ್ವಲ್ಪ ಹೊತ್ತಾದ ಮೇಲೆ ಹನುಮಂತ ಅವಳನ್ನು ಸಂತೈಸಿ, ಯಾರಮ್ಮಾ ನೀನು, ಯಾಕೆ ಅಳುತ್ತಿದ್ದೀಯ? ಎಂದು ಕೇಳಿದ.
664) ಅವಳಿಗೆ ಹನುಮಂತನನ್ನು ನೋಡಿದ ಕೂಡಲೇ ಆತ್ಮೀಯ ಭಾವನೆ ಉಂಟಾಯಿತು. ಕಣ್ಣೊರೆಸಿಕೊಳ್ಳುತ್ತಾ ಹೀಗೆ ಹೇಳಿದಳು.
1. ನನ್ನ ಹೆಸರು ದುರ್ದಂಡಿ.
2. ನಾನು ಇಲ್ಲಿಯ ರಾಜನಾದ ಮೈರಾವಣನ ತಂಗಿ.
3. ನನ್ನ ಗಂಡನ ಹೆಸರು ಕಾಲದಂಡ. ಮಗನ ಹೆಸರು ನೀಲಮೇಘ.
4. ನನ್ನ ಗಂಡ ಪುಣ್ಯಾತ್ಮ. ಸದಾ ಸಾತ್ವಿಕ ಚಿಂತನೆಯಲ್ಲೇ ಮುಳುಗಿರುತ್ತಾನೆ. ಮಹಾನ್ ಹರಿಭಕ್ತ ಅವನು. ಸತ್ಪುರುಷರೆಂದರೆ ಅವನಿಗೆ ಪ್ರಾಣ.
5. ನನಗೆ ಮಗ ಹುಟ್ಟಿದ ಹೊಸದರಲ್ಲಿ ನಾರದಮುನಿ ಬಂದಿದ್ದ. ನಾವು ಅವನ ಸೇವೆಮಾಡಿ, ಈ ಮಗುವಿನ ಭವಿಷ್ಯ ಹೇಗಿದೆ? ಎಂದು ಕೇಳಿದೆವು.
6. ಮಹರ್ಷಿಯು “ಭೂಲೋಕದಲ್ಲಿ ವಿಭೀಷಣನು ಹೇಗೋ, ಪಾತಾಳದಲ್ಲಿ ನಿಮ್ಮ ಮಗ ಹಾಗೆ. ಯಾವತ್ತಿದ್ದರೂ ಈ ರಾಜ್ಯ ಅವನದೇ’ ಎಂದು ಹೇಳಿದ.
ಭೂಮೌ ವಿಭೀಷಣೋ ರಾಜಾ
ಯಥಾ ಪಾತಿ ಜನಾನ್ ಶುಭಮ್‌೤
ತಥಾ ಪಾತಾಳ ಲೋಕೇ ತೇ
ಸುತೋ ರಾಜಾ ಭವಿಷ್ಯತಿ೤೤
ಅರ್ಥ : ಭೂಲೋಕದಲ್ಲಿ ವಿಭೀಷಣನು ಹೇಗೆ ರಾಜನಾಗಿ ಪ್ರಜೆಗಳನ್ನು ಕಾಪಾಡುತ್ತಾನೋ ಹಾಗೇ ನಿನ್ನ ಮಗನೂ ಸಹ ಪಾತಾಳಕ್ಕೆ ರಾಜನಾಗುತ್ತಾನೆ.
7. ನಮ್ಮ ಕರ್ಮವೋ ಏನೋ! ಮಹರ್ಷಿ ಆ ಮಾತನ್ನು ಹೇಳುವಾಗ ನಮ್ಮಣ್ಣ ಅಲ್ಲಿಗೆ ಬಂದ.
8. ನಾರದ ಮಹರ್ಷಿ ಇರುವವರೆಗೂ ಗಂಭೀರವಾಗೇ ಇದ್ದ ನಮ್ಮಣ್ಣ, ಅವನು ಅತ್ತ ಹೋಗುತ್ತಲೇ ನಮ್ಮ ಮಗನನ್ನು ಸಾಯಿಸುವುದಾಗಿ ಹಟಹಿಡಿದ.
9. ನಾನು ಕಾಡಿ ಬೇಡಿ, ಹೇಗೋ ಅವನನ್ನು ಶಾಂತಿಪಡಿಸಿದೆ. ಆದರೆ ಅವನು ನಮ್ಮ ಮೂವರಿಗೂ ಕಾಲಿಗೆ ಸಂಕೋಲೆ ಹಾಕಿ ಸೆರೆಮನೆಯಲ್ಲಿ ಇಟ್ಟ.
10. ಇಷ್ಟು ವರ್ಷಗಳಾದ ಮೇಲೆ, ಪುನಃ ನಮ್ಮಣ್ಣ ನನ್ನನು ಕರೆದು ಪದ್ಮಸರೋವರದಿಂದ ನೀರು ತರಲು ಹೇಳಿದ.
11. ಭೂಲೋಕದಿಂದ ಅದ್ಯಾರೋ ರಾಮಲಕ್ಷ್ಮಣ ಅನ್ನೋರನ್ನು ತಂದಿದ್ದಾನಂತೆ. ಅವರನ್ನು ಬಲಿಕೊಡ್ತಾನಂತೆ. ಆಗ ಅವನಿಗೆ ಸಾವೇ ಇರುವುದಿಲ್ಲವಂತೆ.
12. ಪಾಪ, ಆ ರಾಮಲಕ್ಷ್ಮಣರನ್ನು ನೋಡಿದರೆ ಸ್ವಂತ ತಮ್ಮಂದಿರನ್ನು ನೋಡಿದಂತೆ ಆಗುತ್ತದೆ. ಪಾಪ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ.
13. ನನ್ನನ್ನು ಸಾಯಿಸಿಬಿಡುತ್ತಾನೆ ಎಂಬ ಭಯದಿಂದ ಈ ಸಂಕೋಲೆಯನ್ನೂ ಎಳೆದುಕೊಂಡು ನೀರಿಗಾಗಿ ಇಲ್ಲಿಗೆ ಬಂದಿದ್ದೇನೆ.
14. ಆ ರಾಮ ಲಕ್ಷ್ಮಣರು ಮಹಾ ಪರಾಕ್ರಮಿಗಳೆಂದೂ, ಅವರ ಬಳಿ ಹನುಮಂತನೆಂಬ ಕಪಿವೀರನಿದ್ದಾನೆಂದೂ, ಹನುಮಂತನೆಂದರೆ ರಾಕ್ಷಸರಿಗೆಲ್ಲಾ ನಡುಕವೆಂದೂ ಕೇಳಿದ್ದೇನೆ.
15. ಕೇಳಿದ್ದರೇನು ಬಂತು! ಪಾಪ
ಆ ರಾಮಲಕ್ಷ್ಮಣರೇ ಬಲಿಯಾಗುವುದರಲ್ಲಿದ್ದಾರೆ.
16. ಆ ಕೆಲಸಕ್ಕೆ ಸಹಾಯ ಮಾಡಬೇಕಾಗಿ ಬಂತಲ್ಲಾ ಎಂದು ನನಗೆ ದುಃಖವಾಗುತ್ತಿದೆ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share