ಶ್ರೀ ಆಂಜನೇಯ ಚರಿತ್ರೆ – ಭಾಗ 1 : ಪುಟ – 96

151
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 96
ಓಂ ನಮೋ ಹನುಮತೇ ನಮಃ

ಈ ಮಾತನ್ನು ಕೇಳಿದ ಮತ್ಸ್ಯವಲ್ಲಭನು ಆಶ್ಚರ್ಯಗೊಂಡು, ಹನುಮಂತನಿಗೆ ಸಾಷ್ಟಾಂಗ ವಂದನೆ ಮಾಡಿ ಹೀಗೆ ಸ್ತುತಿಸಿದ.
ಅಜ್ಞಾನ ತಮಸಾಂಧೋಹಂ ಭವತೈವ ಯುಯೋಧ ಹಿ೤
ತ್ವದುನ್ಮೀಲಿತ ನೇತ್ರಾಂ ಕಃ ಕ್ಷಂತವ್ಯೋಥ ಪಿತಸ್ತ್ವಯಾ೤೤
ಓ ತಂದೆ! ಅಜ್ಞಾನವೆಂಬ ಕತ್ತಲಿಂದ ಅಂಧನಾಗಿದ್ದ ನಾನು ನಿಮ್ಮೊಡನೆಯೇ ಯುದ್ಧ ಮಾಡಿಬಿಟ್ಟೆನಲ್ಲಾ! ಈಗ ನಿಮ್ಮಿಂದಲೇ ನನ್ನ ಕಣ್ಣು ತೆರೆಯಿತು. ನನ್ನನ್ನು ಕ್ಷಮಿಸಿ.
ತಂದೆ! ನಾನು ನಿಮ್ಮ ಮಗ. ನಿಮ್ಮೊಡನೆ ಯುದ್ಧ ಮಾಡಿದ್ದಕ್ಕೆ ಕ್ಷಮಿಸಿ. ಮಾಯೋಪಾಯದಿಂದ ರಾಮ ಲಕ್ಷ್ಮಣರನ್ನು ಅಪಹರಿಸಿಕೊಂಡು ಬಂದಿರುವ ಈ ಮೈರಾವಣನ ದಾಸ್ಯ ನನಗಿನ್ನು ಬೇಡ. ಇಂತಹ ನೀಚರನ್ನು ಸಂಹರಿಸುವುದೇ ಉತ್ತಮ ಧರ್ಮ.
ಹನುಮಂತನು ಮಗನನ್ನು ಎಬ್ಬಿಸಿ ಹೀಗೆ ಹೇಳಿದ,
“ಕುಮಾರಾ! ನಿನ್ನೊಡನೆ ಯುದ್ಧ ಮಾಡುತ್ತಿರುವಷ್ಟು ಹೊತ್ತೂ, ಏಕೋ ಏನೋ, ನಿನಗೆ ಜೋರಾಗಿ ಹೊಡೆಯುವ ಮನಸ್ಸೇ ಆಗಲಿಲ್ಲ. ನೀನು ನನ್ನ ಮಗನಾಗಿರುವುದರಿಂದಲೇ ನನ್ನ ಹೊಡೆತವನ್ನು ತಡೆದುಕೊಳ್ಳಲು ಸಾಧ್ಯವಾಯಿತು.
ಆತ್ಮಸ್ತುತಿ ಮಹಾಪಾಪ. ಆದರೆ, ನಿನಗೆ ಗೊತ್ತಾಗಲಿ ಎಂದು ಒಂದು ವಿಷಯ ಹೇಳುತ್ತಿದ್ದೇನೆ, ಕೇಳು. ಯುದ್ಧದಲ್ಲಿ ನನ್ನೆದುರು ಯಾರೂ ನಿಲ್ಲಲಾರರು. ಅದು ನನಗೆ ದೇವತೆಗಳು ಕೊಟ್ಟಿರುವ ವರ.
ನೀನು ಉತ್ತಮವಾದ, ಧರ್ಮಬದ್ಧವಾದ ನಿರ್ಣಯವನ್ನೇ ತೆಗೆದುಕೊಂಡಿರುವೆ. ನಿನಗೆ ನಿನ್ನಷ್ಟೇ ಬಲಿಷ್ಠರಾದ ಎಂಟುಮಂದಿ ಪುತ್ರರು ಹುಟ್ಟಲಿ! ಎಂದು ಆಶೀರ್ವದಿಸಿದ.
ಆಗ ಮತ್ಸ್ಯವಲ್ಲಭನು, ತಾನು ಜೊತೆಯಲ್ಲಿದ್ದು ಹನುಮಂತನನ್ನು ಒಳಗೆ ಕರೆದುಕೊಂಡು ಹೋಗುವುದಾಗಿ ಹೇಳಿದ. ಆದರೆ ಹನುಮಂತ ಹೀಗೆ ಹೇಳಿದ-
“ಅಪ್ಪಾ! ಅದು ಒಳ್ಳೆಯದಲ್ಲ. ‘ಪ್ರಭುನೀತಿ’ ಎಂಬುದೊಂದಿದೆ. ಅದನ್ನು ಅತಿಕ್ರಮಿಸಬಾರದು.
ನಾನು ನನ್ನ ಪೂರ್ಣಬಲದಿಂದ ವಿಜೃಂಭಿಸಲಿಲ್ಲ. ಆದ್ದರಿಂದ ನೀನು ಸೋಲಲಿಲ್ಲ. ಅಷ್ಟೇ ಹೊರತು ವಾಸ್ತವದಲ್ಲಿ ನೀನು ಸೋತಂತೆಯೇ! ಆದ್ದರಿಂದ ಸೋತವನಂತೆ ಒಂದು ಕಡೆ ಬಿದ್ದುಕೊಂಡಿರು. ಅಷ್ಟೇ ಹೊರತು ನನ್ನೊಡನೆ ಬರಬೇಡ. ಅದು ನಿನಗೆ ಧರ್ಮವಲ್ಲ. ಇನ್ನು ನನಗೆ ಸಹಾಯವೇ? ಅದಕ್ಕೆ ಆ ರಾಮಪ್ರಭುವೇ ಇದ್ದಾನಲ್ಲಾ!” ಎಂದ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share