ಶ್ರೀ ಆಂಜನೇಯ ಚರಿತ್ರೆ ಭಾಗ -1 : ಪುಟ -101

146
Share

ಶ್ರೀ ಆಂಜನೇಯ ಚರಿತ್ರೆ ಭಾಗ-1 ಪುಟ 101
ಓಂ ನಮೋ ಹನುಮತೇ ನಮಃ

ಲೋಕದಲ್ಲಿ ಸಂಜೀವ ಪರ್ವತಧಾರಿ ಒಬ್ಬನೇ. ಅಂತಹ ವಾಯುಪುತ್ರನಿಗೆ ಜಯವಾಗಲಿ. ಅವನು ದೂರದ ಲಂಕಾ ಪಟ್ಟಣದಿಂದ ಹಾರಿ ಸಮುದ್ರವನ್ನೂ, ಭೂಮಿಯನ್ನೂ ದಾಟಿ ನೇರವಾಗಿ ಹಿಮಾಲಯ ಪರ್ವತದ ಮೇಲೆ ಇಳಿದರೂ ಒಂದು ನಿಟ್ಟಿಸುರನ್ನು ಬಿಡಲಿಲ್ಲ. ಅವನು ಪರ್ವತ ಶಿಖರವನ್ನು ಚಂಡಿನಂತೆ ಹಿಡಿದುಕೊಂಡು ಪುನಹ ದಕ್ಷಿಣ ದಿಕ್ಕಿಗೆ ಹಾರಿಹೋದ.
ಇದು ಯಾರು ? ರೆಕ್ಕೆ ಇಲ್ಲದ ಗುರುತ್ಮಂತನೋ ಅಥವಾ ರೆಕ್ಕೆ ಇರುವ ಪರ್ವತವೋ ಹೀಗೆ ಆಕಾಶದಲ್ಲಿ ಹಾರಾಡುತ್ತಿರುವುದು ಯಾರು ಎಂದು ದೇವತೆಗಳೆಲ್ಲರೂ ಅವನನ್ನು ನೋಡುತ್ತಿದ್ದರು. ವಾಯುಪುತ್ರ ! ಜಯೀಭವ ! ರಘುರಾಮನನ್ನು ರಕ್ಷಿಸಿದವನೇ ! ಜಯೀ ಭವ ! ಸ್ವಯಂ ಸಂಜೀವನಾದ ನೀನೆ ಜಯಿಭವ ! ಸಚ್ಚಿದಾನಂದ ಜಯೀಭವ !
ಅಮೂಲಿಕೆಗಳ ಸುವಾಸನೆಗಳು ತಗಲುತ್ತಿದ್ದಂತೆ ಅಂದಿನವರೆಗೂ ಮರಣಿಸಿದ್ದ ಮಾನವರೆಲ್ಲರೂ ಎದ್ದು ಕುಳಿತುಕೊಂಡರು. ಅಲ್ಲಿಯವರೆಗೂ ಬಾಣಾದಿಗಳಿಂದ ಗಾಯಗೊಂಡಿದ್ದವರ ಗಾಯಗಳೆಲ್ಲವೂ ವಾಸಿಯಾದವು. ಮುರಿದಿದ್ದ ಮೂಳೆಗಳೆಲ್ಲವೂ ಕೂಡಿಕೊಂಡವು. ಅದೇ ರಣರಂಗದಲ್ಲಿ ಸತ್ತಿದ್ದ ರಾಕ್ಷಸರೂ ಬದುಕಬೇಕಾಗಿತ್ತು. ಆದರೆ ರಾವಣನ ಅತೀ ಬುದ್ಧಿವಂತಿಕೆಯಿಂದ ಹಾಗೆ ಆಗಲಿಲ್ಲ.
ನಿಕೃಷ್ಟರಾದ ವಾನರರ ಕೈಲಿ ತನ್ನ ರಾಕ್ಷಸ ಸೈನ್ಯದವರು ಸತ್ತರು ಎಂದು ಗೊತ್ತಾದರೆ ತನಗೆ ಅವಮರ್ಯಾದೆಯಾಗುತ್ತದೆ ಎಂದು ಸತ್ತು ಹೋದ ರಾಕ್ಷಸರ ಶವಗಳನ್ನು ಆಯಾ ದಿನವೇ ಎತ್ತಿಸಿ ಸಮುದ್ರಕ್ಕೆ ಎಸೆಸುತ್ತಿದ್ದ. ಅಲ್ಲಿದ್ದ ತಿಮಿಂಗಲಗಳು ಆ ಶವಗಳನ್ನು ತಿಂದು ಹಾಕಿಬಿಡುತ್ತಿದ್ದವು. ರಣರಂಗದಲ್ಲಿ ಇವತ್ತು ಇಷ್ಟು ಜನ ವಾನರ ವೀರರು ಸತ್ತರು ರಾಕ್ಷಸರು ಒಬ್ಬರು ಸಾಯಲಿಲ್ಲ ಎಂದು ರಾವಣ ದೇಶದಲ್ಲೆಲ್ಲ ಡಂಗೂರ ಹೊಡೆಸುತ್ತಿದ್ದ.
ಈ ಹುಚ್ಚು ಕೆಲಸದಿಂದ ರಣರಂಗದಲ್ಲಿ ರಾಕ್ಷಸರ ಶವ ಒಂದು ಉಳಿಯಲಿಲ್ಲ. ಹೀಗಾಗಿ ಹನುಮಂತ ತಂದ ಸಂಜೀವಿನಿ ಮೂಲಿಕೆಯ ಲಾಭ ಒಬ್ಬ ರಾಕ್ಷಸನಿಗೂ ಆಗಲಿಲ್ಲ. ನಾಲ್ಕು ದಿನಗಳಲ್ಲೂ ಸುತ್ತಾಡಿ ವಾನರರೆಲ್ಲರನ್ನು ಬದುಕಿಸಿದ ನಂತರ ಹನುಮಂತ ಪುನಹ ಆಕಾಶಕ್ಕೆಗರಿ 5ನೇ ಬಾರಿ ಸಮುದ್ರವನ್ನು ದಾಟಿ ಆ ಪರ್ವತವನ್ನು ಹಿಮಾಲಯದಲ್ಲಿ ಯಥಾ ಸ್ಥಾನದಲ್ಲಿ ಇಟ್ಟು ಹಿಂತಿರುಗಿ ಬಂದ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share