ಶ್ರೀ ಆಂಜನೇಯ ಚರಿತ್ರೆ – ಭಾಗ – 1 : ಪುಟ – 98

163
Share

ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 98
ಓಂ ನಮೋ ಹನುಮತೇ ನಮಃ

ಹನುಮಂತನು ಕೂಡಲೇ ದುರ್ದಂಡಿಯ ಸಂಕೋಲೆಗಳನ್ನು ಕತ್ತರಿಸಿಹಾಕಿ, ರಾಮಲಕ್ಷ್ಮಣರು ಎಲ್ಲಿದ್ದಾರೆ ಎಂದು ತಿಳಿದುಕೊಂಡು, ಅಲ್ಲಿಗೆ ಹೋದ. ನಂತರ ದುರ್ದಂಡಿಯು ತಂದ ಚಿನ್ನದ ಕೊಡದಲ್ಲಿದ್ದ ನೀರಿನಿಂದಲೇ ಅವಳ ಮಗನಾದ ನೀಲಮೇಘನಿಗೆ ಪಾತಾಳಲಂಕೆಯ ಪಟ್ಟಾಭಿಷೇಕ ಮಾಡಿದ.
ತಡಮಾಡದೇ ಹನುಮಂತನು ರಾಮಲಕ್ಷ್ಮಣರು ಇರುವ ಪೆಟ್ಟಿಗೆಯನ್ನು ಕಂಕುಳಲ್ಲಿ ಇಟ್ಟುಕೊಂಡು, ಪುರದ್ವಾರದ ಬಳಿ ಬಂದ. ಅಲ್ಲಿ ಮತ್ಸ್ಯವಲ್ಲಭನು ತಂದೆಗಾಗಿ ಕಾಯುತ್ತಿದ್ದ. ಅವನು ತಂದೆಯ ಮೇಲೆ ಯುದ್ಧ ಮಾಡಿದೆನಲ್ಲಾ ಎಂದು ಬಾಧೆಪಡುತ್ತಿದ್ದ. ಹನುಮಂತನು ಅವನನ್ನು ಸಂತೈಸಿ, ಬಾಚಿ ತಬ್ಬಿಕೊಂಡು, ಹೊಸದಾಗಿ ಪಟ್ಟಾಭಿಷಿಕ್ತನಾದ ನೀಲಮೇಘನ ರಕ್ಷಣೆಗಾಗಿ ಅವನನ್ನು ನೇಮಿಸಿದ.
ನಂತರ ಹನುಮಂತನು ಮನೋವೇಗದಿಂದ ಲಂಕಾಸಮುದ್ರ ತೀರಕ್ಕೆ ಬಂದು ಸೇರಿದ. ಮುಂಚಿನಂತೆಯೇ ಬಾಲದಿಂದ ಪ್ರಾಕಾರವನ್ನು ನಿರ್ಮಿಸಿ, ಒಳಗೆ ರಾಮ ಲಕ್ಷ್ಮಣರನ್ನು ಮಲಗಿಸಿದ.
ನಂತರ ಹನುಮಂತನು ರಾಮ ಧ್ಯಾನ ಮಾಡಲು, ಆ ಧ್ಯಾನದ ಪ್ರಭಾವದಿಂದ ಮೈರಾವಣನು ಹಾಕಿದ್ದ ಮತ್ತಿನ ಔಷಧಿಯ ಪ್ರಭಾವ ಸಂಪೂರ್ಣ ಕಡಿಮೆಯಾಯಿತು. ರಾಮಲಕ್ಷ್ಮಣರಿಗೆ ಎಚ್ಚರ ಆಯಿತು. ತುಂಬಾ ಹೊತ್ತು ನಿದ್ದೆ ಹತ್ತಿತಲ್ಲಾ! ಎಂದುಕೊಂಡು ಆತುರಾತುರವಾಗಿ ಯುದ್ಧ ಭೂಮಿಗೆ ಬಂದರು. ಹನುಮಂತ ವಿಭೀಷಣರೂ ಅವರೊಡನೆ ಯುದ್ಧರಂಗಕ್ಕೆ ಬಂದರು.
ವಿನಯಶಾಲಿಯಾದ ಹನುಮಂತನು ನಡೆದ ವಿಷಯವನ್ನು ಯಾರಿಗೂ ಹೇಳಲಿಲ್ಲ. ಆದರೆ ಹನುಮಂತನ ಪ್ರಭಾವವನ್ನು ವಿಭೀಷಣ ಮನಸಾರೆ ಮೆಚ್ಚಿಕೊಂಡ.
( ಮುಂದುವರೆಯುವುದು )

* ರಚನೆ : ಪರಮ ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share