ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ – 64

205
Share

ಶ್ರೀ ಆಂಜನೇಯ ಚರಿತ್ರೆ ಭಾಗ – 1 : ಪುಟ – 64
ಓಂ ನಮೋ ಹನುಮತೇ ನಮಃ

494) ಹನುಮಂತನ ಆಲೋಚನೆಗಳು ಬಗೆಬಗೆಯಾಗಿ ತಿರುವುಗಳನ್ನು ತೆಗೆದುಕೊಂಡು, ಕಟ್ಟಕಡೆಗೆ ಕರ್ತವ್ಯದ ಬಳಿ ಬಂದು ಸೇರಿದವು. ಆಗ ಅವನ ಮನಸ್ಸು ತಿಳಿಯಾಯಿತು. ಅವನು ದೊಡ್ಡ ಸೌಧವನ್ನು ಏರಿ, ದೂರದೂರಕ್ಕೆ ತನ್ನ ದೃಷ್ಟಿಯನ್ನು ಚಾಚಿದ.
495) ಹಾಗೆ ಪರಿಶೀಲಿಸುತ್ತಿರುವಾಗ ಅಲ್ಲಿಗೆ ಹತ್ತಿರದಲ್ಲೇ ಒಂದು ಅಶೋಕ ವನ ಕಾಣಿಸಿತು. ಅದು ನೈಸರ್ಗಿಕವಾದ ಕಾಡಿನಂತೆ ಇರಲಿಲ್ಲ. ಅದರ ಸುತ್ತಲೂ ಪ್ರಾಕಾರ, ಪ್ರಾಕಾರದ ಪಕ್ಕದಲ್ಲಿ ಕಾವಲುಗಾರರ ಪರಿವಾರ ಕಾಣಿಸಿತು. ಹನುಮಂತನ ಕುತೂಹಲ
ಹೆಚ್ಚಿತು. ಈ ಪ್ರದೇಶದಲ್ಲಿ ಹುಡುಕಿರಲಿಲ್ಲ. ಇದಾವುದೋ ಮುಖ್ಯ ಪ್ರದೇಶದಂತೆ ಕಾಣಿಸುತ್ತಿದೆ. ಬಲವಾದ ಕಾವಲೂ ಹಾಕಿದ್ದಾರೆ. ಇದನ್ನು ಯಾಕೆ ಹುಡುಕಲಿಲ್ಲ?” ಎಂದುಕೊಳ್ಳುತ್ತಾ ಹನುಮಂತ ಆ ಅಶೋಕವನದ ಕಡೆ ಹೊರಟ.
ಅಶೋಕ ವನ
496) ಆ ವನವು ರಾವಣನ ರಾಜನಗರದ ಪ್ರಾಕಾರದಲ್ಲೇ ಸ್ವಲ್ಪ ಇಳಿ ಪ್ರಾಂತ್ಯದಲ್ಲಿತ್ತು. ಹನುಮಂತ ಈಗ ಬೆಟ್ಟದ ಮೇಲಿದ್ದ ವಿಮಾನ ಭವನದ ಮೇಲಿನ ಮಹಡಿಯಲ್ಲಿದ್ದ. ಪುನಃ ಸೀತಾದೇವಿಗೋಸ್ಕರ ಹೊರಡಬೇಕು ಅಂದುಕೊಂಡಾಗ ಅವನ ಎದೆ ಡವಡವ
ಎಂದಿತು. ಮುಕ್ಕೋಟಿ ದೇವತೆಗಳಿಗೂ ಪ್ರತ್ಯೇಕವಾಗಿ ವಂದನೆ ಸಲ್ಲಿಸಿದ. ಕೊನೆಗೆ ತನ್ನ ಉಪಾಸ್ಯದೇವತೆಗಳಿಗೆ ಮತ್ತೆಮತ್ತೆ ನಮಸ್ಕಾರ ಮಾಡಿದ. ಲಕ್ಷ್ಮಣ ಸಹಿತನಾದ ರಾಮನಿಗೆ ನಮಸ್ಕಾರ. ಆ ತಾಯಿ ಸೀತೆಗೆ ನಮಸ್ಕಾರ. ರುದ್ರ, ಇಂದ್ರ, ಯಮ,
ವಾಯುಗಳಿಗೆ ನಮಸ್ಕಾರ. ಚಂದ್ರ ಸೂರ್ಯರಿಗೆ, ದೇವತಾಗಣಗಳಿಗೆ ನಮಸ್ಕಾರ – ಎನ್ನುತ್ತಾ ವಂದಿಸಿ, ರಾಜಭವನ ಶಿಖರದಿಂದ ಅಶೋಕವನದ ಪ್ರಾಕಾರಕ್ಕೆ ಒಂದೇ ಒಂದು ಜಿಗಿತದಲ್ಲಿ ಧುಮುಕಿದ.
497) ನೋಡುತ್ತಾನೆ! ಅಲ್ಲಿ ಅಶೋಕವೃಕ್ಷಗಳಷ್ಟೇ ಅಲ್ಲದೇ ಹಲವು ಸಾವಿರ ಜಾತಿಯ ಗಿಡಗಳಿದ್ದವು. ಮೇಲಿಂದ ಕಾಡಿನಂತೆ ಕಂಡರೂ, ಒಳಗೆ ಅದು ಒಂದು ದೊಡ್ಡ ಉದ್ಯಾನವನ (ಪಾರ್ಕ್) ಆಗಿತ್ತು. ಅದರ ರಚನೆ, ಸಂರಕ್ಷಣೆಯೂ ಅದ್ಭುತವಾಗಿತ್ತು.
498) ಆ ತೋಟದಲ್ಲಿ ಒಂದು ಚಿಕ್ಕ ಗುಡ್ಡ, ಒಂದು ಸಣ್ಣ ನದಿಯೂ ಇತ್ತು.
ಆ ತೋಟದ ಅಂದವನ್ನು ಗಮನಿಸುತ್ತಾ ಮುಂದೆ ಸಾಗಿದ ಹನುಮಂತ. ಒಂದು ದೊಡ್ಡ ಶಿಂಶುಪಾ ವೃಕ್ಷವನ್ನು ಏರಿ, ನಾಲ್ಕು ದಿಕ್ಕುಗಳಲ್ಲೂ ದೃಷ್ಟಿ ಹಾಯಿಸಿದ. ಅಲ್ಲಿಗೆ ಹತ್ತಿರದಲ್ಲಿ ಒಂದು ಚಿಕ್ಕ ದೇವಸ್ಥಾನವಿತ್ತು. ಚಿಕ್ಕದು ಎಂದರೆ, ಸಾವಿರ ಸ್ತಂಭಗಳಿದ್ದ
ದೇವಸ್ಥಾನ. ಅದರ ಪಕ್ಕದಲ್ಲೇ ನದಿ ಹರಿಯುತ್ತಿತ್ತು.
ಅಮ್ಮ ಕಾಣಿಸಿದಳು
499) ಆ ಗುಡಿಗೆ ಹತ್ತಿರದಲ್ಲೇ ಒಂದು ಮರದ ಕೆಳಗೆ, ಬಡಕಲಾಗಿ, ಮಾಸಿದ ಸೀರೆಯುಟ್ಟಿದ್ದ ಒಬ್ಬ ತೇಜಸ್ವಿನೀ ಹೆಂಗಸು ಕಾಣಿಸಿದಳು. ಅವಳ ಸುತ್ತಲೂ ಅನೇಕಮಂದಿ ವಿಕೃತ ರಾಕ್ಷಸ ಸ್ತ್ರೀಯರು ಕಾವಲಾಗಿದ್ದರು.
ಶ್ಲೋಕ೤೤
ಉಪವಾಸ ಕೃಶಾಂ ದೀನಾಂ
ನಿಶ್ವಸಂತೀಂ ಪುನಃ ಪುನಃ೤
ದದರ್ಶ ಶುಕ್ಲಪಕ್ಷಾದೌ ಚಂದ್ರರೇಖಾ
ಮಿವಾಮಲಮ್‌೤೤
ಅರ್ಥ : ಅವಳು ಉಪವಾಸದಿಂದ ಕೃಶಳಾಗಿಯೂ ದೀನಳಾಗಿಯೂ ಇದ್ದಳು. ಪದೇಪದೇ ನಿಟ್ಟುಸಿರು ಬಿಡುತ್ತಿದ್ದಳು. ಅವಳು ನೋಡಲು ಶುಕ್ಲಪಕ್ಷದ ಪ್ರಾರಂಭದ ಚಂದ್ರರೇಖೆಯಂತೆ ಇದ್ದಳು.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ
ಭಾಲರಾ
ಬೆಂಗಳೂರು


Share