ಶ್ರೀ ಆಂಜನೇಯ ಚರಿತ್ರೆ ಭಾಗ 1 : ಪುಟ 106

183
Share

ಶ್ರೀ ಆಂಜನೇಯ ಚರಿತ್ರೆ ಭಾಗ : ಒಂದು ಪುಟ 106 
ಓಂ ನಮೋ ಹನುಮತೆ ನಮಃ

ಹನುಮಂತ ಸೂಚಿಸಿದ ಉಪಾಯವನ್ನು ಕೇಳಿ ರಾಮ ಸೋದರರೆಲ್ಲ ನಿಬ್ಬರಗಾದರು. ಭಲೇ ಭಲೆ ಎನ್ನುತ್ತಾ ಹನುಮಂತನನ್ನು ಮೆಚ್ಚಿಕೊಂಡರು. ಕೂಡಲೇ ಶ್ರೀರಾಮನು ತನ್ನ ಸೇವೆಗೆ ಆಜ್ಞೆ ಜಾರಿ ಮಾಡಿದ. ವಾನರ ಸೈನ್ಯವನ್ನು ಕರೆತರುವಂತೆ ಸುಗ್ರೀವನಿಗೆ ಹೇಳಿ ಕಳಿಸಿದ. ರಾಕ್ಷಸ ಸೈನ್ಯವನ್ನು ಕರೆತರುವಂತೆ ವಿಭೀಷಣನಿಗೆ ಹೇಳಿ ಕಳಿಸಿದ. ಎಲ್ಲರೂ ಬಂದ ಮೇಲೆ ಒಂದು ಶುಭ ಮುಹೂರ್ತದಲ್ಲಿ ಸೀತಾರಾಮರು ಹನುಮಂತನ ಬಲ ಭುಜದ ಮೇಲೆ ಕುಳಿತರು. ಉಳಿದವರು ಹನುಮಂತ ಹೇಳಿದಂತೆ ಆಯಾ ಸ್ಥಳಗಳಲ್ಲಿ ಕುಳಿತುಕೊಂಡರು. ಇನ್ನೇನು ಹನುಮಂತನಿಗೆ ಬೆಳೆಯುವಂತೆ ಆಜ್ಞಾಪಿಸಬೇಕು ಎಂದುಕೊಳ್ಳುತ್ತಿದ್ದಾಗ ಪುನಃ ಆಕಾಶವಾಣಿ ಕೇಳಿ ಬಂತು.
ಶ್ರೀರಾಮ ಅದೇನು ರಾವಣಾಸುರನ ಲಂಕೆಯಂತೆ ಪರ್ವತ ಪ್ರಾಕಾರ ಅಂದುಕೊಂಡೆಯಾ ? ಶತಕಂಠ ಲಂಕೆಗೆ ಇರುವುದು ಅಗ್ನಿ ಪ್ರಾಕಾರ. ಆ ಜ್ವಾಲೆಗಳ ಕಾವಿಗೆ ಪರ್ವತಗಳು ಕರಗಿ ಹೋಗುತ್ತದೆ. ನಿಮ್ಮ ಹನುಮಂತ ಅಲ್ಲಿಯವರೆಗೆ ಬೆಳೆದಿದ್ದೆ ಆದರೆ ಆ ಜ್ವಾಲೆಗಳಿಗೆ ಸಿಕ್ಕಿ ಅವನ ತಲೆ ಸುಟ್ಟು ಹೋಗುತ್ತದೆ. ಒಂದು ವೇಳೆ ಅವನು ಅದನ್ನು ತಡೆದುಕೊಂಡರು ನೀವು ನಿಮ್ಮ ಸೈನ್ಯವು ಬೂದಿಯಾಗುವುದು ಖಂಡಿತ. ಆದ್ದರಿಂದ ಹುಷಾರು.
ಈ ಮಾತುಗಳನ್ನು ಕೇಳುತ್ತಲೇ ಶ್ರೀ ರಾಮನ ಮುಖ ಬಾಡಿಹೋಯಿತು. ಏನು ಮಾತೇ ಹೊರಡಲಿಲ್ಲ. ಹನುಮಂತ ಮಾತ್ರ ಹೂಂಕರಿಸಿ ತನ್ನ ಬಾಲವನ್ನು ಗಿರಗಿರನೆ ತಿರುಗಿಸಿ ಅದರಿಂದ ಹೊರಟ ಗಾಳಿಯಿಂದ ಶತಕಂಠನ ಅಗ್ನಿ ಪ್ರಾಕಾರ ಜ್ವಾಲೆಯನ್ನು ಚದುರಿಸಿ ಜಲ ಸಮುದ್ರದಲ್ಲಿ ಅಡಗಿಸಿ ಬಿಟ್ಟ. ಈ ಅದ್ಭುತ ಕಾರ್ಯವನ್ನು ನೋಡಿ ದೇವತೆಗಳು ಆಶ್ಚರ್ಯಗೊಂಡರು . ಆಗ ಶ್ರೀ ರಾಮನು ಆ ಬಾಲವನ್ನು ಹಾಗೆ ಇಟ್ಟುಕೊಂಡಿರು ಎಂದು ಹೇಳಿ ತಾನೇ ಸೀತಾದೇವಿಯೊಡನೆ ಮುನ್ನಡೆದು ನರವಾನರ ರಾಕ್ಷಸರ ಸೈನ್ಯವನ್ನು ನಡೆಸಿಕೊಂಡು ಶತಕಂಠ ಲಂಕೆಯವರೆಗೂ ಪ್ರಯಾಣ ಮಾಡಿದ.
( ಮುಂದುವರೆಯುವುದು )

* ರಚನೆ : ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

* ಸಂಗ್ರಹ :
ಭಾಲರಾ
ಬೆಂಗಳೂರು


Share